ಜಿಲ್ಲೆಯ ರೈತರಿಗೆ 44.93 ಕೋಟಿ ರೂ ನೆರವು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾಹಿತಿ

Kisan Samman grant released Mandya
Published on

ಮಂಡ್ಯ: ರೈತರು ಕೃಷಿ ಚಟುವಟಿಕೆ ಮಾಡಲು ಅನುಕೂಲವಾಗುವಂತೆ ವರ್ಷದಲ್ಲಿ 3 ಕಂತಿನಲ್ಲಿ 2 ಸಾವಿರ ರೂ ನೀಡಲಾಗುತ್ತಿದೆ. ಅದೇ ರೀತಿ ಜಿಲ್ಲೆಯಲ್ಲಿ 2,24,634 ರೈತರು ಕಿಸಾನ್ ಸಮ್ಮಾನ್ ಯೋಜನೆಯಡಿ ನೆರವು ಪಡೆಯುತ್ತಿದೆ. ಕಳೆದ 18 ಕಂತುಗಳಲ್ಲಿ 44.93 ಕೋಟಿ ರೂ ನೆರವು ನೀಡಲಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ತಾಲೂಕಿನ ವಿ.ಸಿ.ಫಾರ್ಮ್‌ನಲ್ಲಿ ಆಯೋಜಿಸಿದ್ದ ಕಿಸಾನ್ ಸಮ್ಮಾನ್ ಯೋಜನೆಯಡಿ ಅನುದಾನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2019ನೇ ಸಾಲಿನಲ್ಲಿ ಕಿಸಾನ್ ಸಮ್ಮಾನ್ ಯೋಜನೆಗೆ ಚಾಲನೆ ನೀಡಲಾಯಿತು. ಈ ಹಿನ್ನೆಲೆಯಲ್ಲಿ ರೈತರಿಗೆ 19ನೇ ಕಂತಿನ ಹಣ ಬಿಡುಗಡೆಯಾಗುತ್ತಿದೆ ಎಂದರು.

ರೈತರು ಮುಂಗಾರು ಅಥವಾ ಹಿಂಗಾರು ಪ್ರಾರಂಭವಾಗುತ್ತಿದ್ದಂತೆ ಯಾವುದೇ ಲಾಭ ನಷ್ಟವನ್ನು ಲೆಕ್ಕಾಚಾರ ಮಾಡದೆ ಬಿತ್ತನೆ ಪ್ರಾರಂಭಿಸಿ ದೇಶಕ್ಕೆ ಆಹಾರ ನೀಡುವ ನಿಸ್ವಾರ್ಥ ಮನಸ್ಸಿನವರು. ಇವರಿಗಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ದೇಶದಲ್ಲಿ ಶೇ.50ಕ್ಕಿಂತ ಹೆಚ್ಚು ಜನರು ರೈತರಿದ್ದಾರೆ. ರೈತರು ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ. ಕೃಷಿಯ ಮೇಲೆ ಅವಲಂಬಿತರಾಗಿರುವ ರೈತರಿಗೆ 22 ಬೆಳೆಗೆ ಮಾತ್ರ ಬೆಂಬಲ ಬೆಲೆ ನೀಡಿರುವ ಬಗ್ಗೆ ಅಸಮಾಧನವಿದೆ. ಬೆಂಬಲ ಬೆಲೆ ಯೋಜನೆಯಡಿ ಬೆಳೆಗಳ ಸಂಖ್ಯೆ ಹೆಚ್ಚಾಗಬೇಕಿದೆ ಎಂದು ಹೇಳಿದರು.

ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು, ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಇತರರಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಿಸಾನ್ ಸಮ್ಮಾನ್ ಯೋಜನೆಯ 19ನೇ ಕಂತನ್ನು ಬಿಹಾರದಲ್ಲಿ ಬಿಡುಗಡೆ ಮಾಡಿದರು. ಇದನ್ನು ಆನ್‌ಲೈನ್‌ನಲ್ಲಿ ವೀಕ್ಷಣೆ ಮಾಡಲು ಅವಕಾಶ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net