ಅಡಕೆ ಕೃಷಿಕರ ಸಮಸ್ಯೆ ಪರಿಹಾರ : ಕಿಸಾನ್ ಸಭೆ ಒತ್ತಾಯ

New Project (7)
Published on

ಕುಂಬಳೆ: ಜಿಲ್ಲೆಯ ಪ್ರಧಾನ ವಾಣಿಜ್ಯ ಬೆಳೆಯಾದ ಅಡಕೆ ಕೃಷಿ ನಾನಾ ಸಮಸ್ಯೆ ಸುಳಿಯಲ್ಲಿ ಸಿಲುಕಿದೆ. ಇದಕ್ಕೆ ಪರಿಹಾರ ಕಲ್ಪಿಸಬೇಕೆಂದು ಕಿಸಾನ್ ಸೇನೆ ಜಿಲ್ಲಾ ಪದಾಧಿಕಾರಿಗಳು ಬುಧವಾರ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

ಸಾವಿರಕ್ಕಿಂತಲೂ ಹೆಚ್ಚು ಕುಟುಂಬ ಅಡಕೆ ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದು, ಜಿಲ್ಲೆಯಲ್ಲಿ 19,500 ಹೆಕ್ಟೇರ್ ಭೂಮಿಯಲ್ಲಿ ಅಡಕೆ ಕೃಷಿ ಬೆಳೆಸಲಾಗುತ್ತಿದೆ. ಎರಡು ಲಕ್ಷ ಕ್ವಿಂಟಾಲಿಗೂ ಮಿಕ್ಕಿ ಅಡಕೆ ಉತ್ಪಾದಿಸಲಾಗುತ್ತದೆ. ಇತ್ತೀಚಿನ ವಷರ್ಗಳಿಂದ ಹಲವು ರೋಗಗಳಿಂದಾಗಿ ಅಡಕೆ ಉತ್ಪಾದನೆ ಕುಸಿದು ಪಾತಾಳಕ್ಕೆ ಇಳಿದಿದೆ. ಹಳದಿ ರೋಗ, ಎಲೆಚುಕ್ಕಿ ರೋಗ, ಹಿಂಗಾರ ಕಪ್ಪಾಗುವ ರೋಗ, ಮಹಾಳಿ ರೋಗ ಮುಂತಾದ ರೋಗಗಳಿಂದಾಗಿ ಅಡಕೆ ಮರ ನೆಲಕಚ್ಚಿದೆ.

ಎಲ್ಲ ಕೃಷಿಕರಿಗೆ ಭೂಮಿಯ ವಿಸ್ತೀರ್ಣ ಪರಿಗಣಿಸದೆ ಡ್ರೋನ್, ಕಾರ್ಮಿಕರ ಮೂಲಕ ಉಚಿತವಾಗಿ ಔಷಧಿ ಸಿಂಪಡಿಸುವ ವ್ಯವಸ್ಥೆ ಮಾಡಬೇಕು. ಕೃಷಿ ಸಾಲಗಳ ಅವಧಿಯನ್ನು ಬಡ್ಡಿ ರಹಿತ 3 ವರ್ಷ ಮುಂದುವರಿಸಬೇಕು. ಆಸ್ತಿಯನ್ನು ಏಲಂ, ಜಪ್ತಿ ಮುಂತಾದವುಗಳಿಂದ ತಡೆಯಬೇಕು. ಕೃಷಿ ಸಾಲಕ್ಕೆ ಜಾರಿಯಲ್ಲಿರುವ ಎಲ್ಲ ಬಡ್ಡಿಯನ್ನು ಮನ್ನಾ ಮಾಡಬೇಕು. ಎಲೆಚುಕ್ಕಿ ರೋಗ ಫಸಲ್ ಭೀಮಾ ಪಿ.ಎಂ.ಎಫ್.ವೈ. ಯೋಜನೆಯಡಿಯಲ್ಲಿ ಸೇರಿಸಿ ವಿಮಾ ಯೋಜನೆ ಜಾರಿಗೊಳಿಸಬೇಕು. ವನ್ಯ ಜೀವಿಗಳಿಂದುಂಟಾದ ಕೃಷಿ ನಾಶಕ್ಕೆ ಸರಿಯಾದ ಪರಿಹಾರ ಒದಗಿಸಬೇಕು. ವಿದ್ಯುತ್ ಬೇಲಿ, ಟ್ರಂಚ್ ತಯಾರಿಸಿ ಪರಿಹಾರ ನೀಡಬೇಕು. ಎಲ್ಲ ಕೃಷಿಕರಿಗೂ ಅನ್ವಯಿಸುವಂತೆ ಉಚಿತ ವಿದ್ಯುತ್ ಒದಗಿಸಬೇಕು. ಡ್ರೋನ್ ಉಪಯೋಗಿಸಿ ಮದ್ದು, ಮೈಕ್ರೋ ನ್ಯೂಟ್ರಿಷನ್ ಮುಂತಾದವುಗಳನ್ನು ಸಿಂಪಡಿಸಲು ಅನುಮತಿ ಕೊಡಬೇಕು ಎಂದು ಕಿಸಾನ್ ಸಭೆ ಒತ್ತಾಯಿಸಿದೆ.

ಕಿಸಾನ್ ಸೇನೆ ಜಿಲ್ಲಾಧ್ಯಕ್ಷ ಕೆ.ಗೋವಿಂದ ಭಟ್ ಕೊಟ್ಟಂಗುಳಿ, ಪ್ರಧಾನ ಕಾರ್ಯದರ್ಶಿ ಶುಕೂರ್ ಕಾಣಾಜೆ, ಜತೆ ಕಾರ್ಯದರ್ಶಿ ಸಚಿನ್ ಕುಮಾರ್ ಎಂ. ಮಾಹಿತಿ ನೀಡಿದರು.

ಶೇ.80ರಷ್ಟು ಕುಸಿತ

ಎಲೆಚುಕ್ಕಿ ರೋಗ ಅತಿವೇಗದಲ್ಲಿ ಹರಡುವುದರಿಂದ ಅಡಕೆ ಉತ್ಪಾದನೆ ಶೇಕಡಾ 80ರಷ್ಟು ಕುಸಿದಿದೆ. ವನ್ಯಜೀವಿಗಳ ಹಾವಳಿಯಿಂದ ಕೃಷಿ ನಾಶ ಉಂಟಾದ ಕೃಷಿಕರಿಗೆ ಸರ್ಕಾರದಿಂದ ನಷ್ಟ ಪರಿಹಾರ ಲಭ್ಯವಾಗುವುದಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳು ಪರಿಗಣಿಸಿ ರಾಜ್ಯ ಸರ್ಕಾರದಿಂದ ಅಡಕೆ ಕೃಷಿಕರಿಗೆ ಬೇಕಾದ ಸೂಕ್ತ ಪರಿಹಾರ ಒದಗಿಸಬೇಕೆಂದೂ, ಕಾಸರಗೋಡು ಜಿಲ್ಲೆ ಕೃಷಿ ವಲಯವನ್ನು ದುರಂತ ಬಾಧಿತ ಪ್ರದೇಶವಾಗಿ ಘೋಷಿಸಬೇಕೆಂದೂ ಕಿಸಾನ್ ಸೇನೆ ಒತ್ತಾಯಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net