

ಮಡಿಕೇರಿ:
ತೋಟಗಾರಿಕೆ ಕ್ಷೇತ್ರಕ್ಕೆ ಸಂಬAಧಿಸಿದAತೆ ಎಲ್ಲಾ ರೀತಿಯ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಕಿಸಾನ್ ಮಾಲ್ ಕೊಡಗಿಲ್ಲೂ ಆರಂಭಿಸುವAತೆ ಕೃಷಿಕರಿಂದ ಒತ್ತಾಯ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ತೋಟಗಾರಿಕೆ ಇಲಾಖೆ ಕಡೆಯಿಂದಲೂ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿರುವ ಮಾಹಿತಿ ಸಿಕ್ಕಿದ್ದು, ಮುಂದಿನ ವರ್ಷ ಕಾರ್ಯಾರಂಭ ಮಾಡಲಿದೆ ಎಂದು ಹೇಳಲಾಗುತ್ತಿದೆ. ಕೃಷಿ ಪ್ರಧಾನ ಜಿಲ್ಲೆಯಲ್ಲಿ ಇಂಥ ಒಂದು ಸೇವೆಯ ಅಗತ್ಯ ಹೆಚ್ಚಾಗಿದ್ದು, ಇದರಿಂದ ರೈತರಿಗೆ ಸಾಕಷ್ಟು ಅನುಕೂಲ ಆಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ತೋಟಗಾರಿಕೆಯ ಮೂಲ ಅವಶ್ಯಕ ಪರಿಕರಗಳಾದ ಬೀಜ, ಕಸಿ ಮತ್ತು ಸಸಿ ಗಿಡಗಳು, ಸಸ್ಯ ಪೋಷಕಾಂಶ ಮತ್ತು ರಸಗೊಬ್ಬರಗಳು, ಬೆಳೆ ಹಾರ್ಮೋನುಗಳು, ರಾಸಾಯನಿಕ ಪೀಡೆನಾಶಕಗಳು, ಜೈವಿಕ ಗೊಬ್ಬರ, ಎರೆಹುಳು ಮತ್ತಿತರೆ ಗೊಬ್ಬರಗಳು, ಕೃಷಿ ಪರಿಕರಗಳು ಇತ್ಯಾದಿಗಳನ್ನು ಒಂದೇ ಸೂರಿನಡಿ ಬೆಳೆಗಾರರಿಗೆ ದೊರಕುವಂತೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ರಾಜ್ಯದಲ್ಲಿ ಕಿಸಾನ್ ಮಾಲ್‌ಗಳ ಸ್ಥಾಪನೆ ಬಗ್ಗೆ 2024-25ರ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಇದರಂತೆ ಮಂಡ್ಯ ಜಿಲ್ಲೆ ಮದ್ದೂರು ಮತ್ತು ಬಾಗಲಕೋಟೆಯಲ್ಲಿ ಕಿಸಾನ್ ಮಾಲ್‌ಗಳು ಈಗಾಗಲೇ ರೈತ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿವೆ.
ಈ ಬಗೆಯ ಕಿಸಾನ್ ಮಾಲ್ ಮಲೆನಾಡು ಜಿಲ್ಲೆ ಕೊಡಗಿಗೂ ತೀರಾ ಅಗತ್ಯವಾಗಿದೆ ಎನ್ನುವುದು ಸ್ಥಳೀಯ ಕೃಷಿಕರ ಬೇಡಿಕೆ. ಒಟ್ಟು 4,10,775 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣ ಹೊಂದಿರುವ ಕೊಡಗಿನಲ್ಲಿ 1,34,597 ಹೆಕ್ಟೇರ್ ಅರಣ್ಯ ಪ್ರದೇಶ ಇದೆ. ಉಳಿದಂತೆ 1,06,766 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ತೋಟಗಳು ಹರಡಿವೆ. 30,500 ಹೆ. ಪ್ರದೇಶದಲ್ಲಿ ಭತ್ತ ಬೆಳೆದರೆ, 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆ ತೆಗೆಯಲಾಗುತ್ತದೆ. 8,534 ಹೆ. ಪ್ರದೇಶದಲ್ಲಿ ವಿವಿಧ ರೀತಿಯ ತೋಟಗಾರಿಕೆ ಬೆಳೆಗಳನ್ನು ಬೆಳೆಸಲಾಗುತ್ತಿದೆ. 8,956 ಹೆಕ್ಟೇರ್ ಪ್ರದೇಶದಲ್ಲಿ ಸಾಂಬಾರ ಬೆಳೆಗಳು ಕಂಡುಬರುತ್ತದೆ.
ಕೊಡಗಿನಲ್ಲಿ ಕಾಫಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಗುರುತಿಸಿಕೊಂಡಿದ್ದರೂ ಅಡಿಕೆ, ತೆಂಗು, ಬಾಳೆ, ಸಪೋಟ, ಮಾವು, ಸೀಬೆ, ಕಿತ್ತಳೆ, ಭತ್ತ, ಕರಿಮೆಣಸು, ಇತ್ತೀಚಿನ ವರ್ಷಗಳಲ್ಲಿ ಬಟರ್‌ಫ್ರೂಟ್ ಸೇರಿದಂತೆ ವಿದೇಶಿ ಹಣ್ಣಿನ ಬೆಳೆಗಳು, ಶುಂಠಿ ಸೇರಿದಂತೆ ಅಲ್ಪಾವಧಿ ವಾಣಿಜ್ಯ ಬೆಳೆಗಳನ್ನೂ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ಕೆಲವು ಪ್ರಯೋಗಶೀಲರು ರೇಷ್ಮೆ, ಮಿನುಸಾಕಾಣಿಕೆ, ಪಶುಪಾಲನೆಯ ಮೂಲವೂ ಬದುಕು ಕಟ್ಟಿಕೊಂಡಿದ್ದಾರೆ. ಹಾಗಾಗಿ ಕೊಡಗು ಪ್ರವಾಸೋದ್ಯಮದ ಮೂಲಕ ಹೆಸರು ಮಾಡುತ್ತಿದ್ದರೂ ಇಲ್ಲಿಯ ಮೂಲ ಕಸುಬಾದ ಕೃಷಿ ಬಹುತೇಕರ ಜೀವನಾಧಾರವಾಗಿದೆ.
ಈ ಹಿನ್ನೆಲೆಯಲ್ಲಿ ಕೊಡಗಿನ ಕೃಷಿಕರಿಗೆ ತಮ್ಮ ಕಾಯಕಕ್ಕೆ ಇನ್ನಷ್ಟು ಅನುಕೂಲ ಒದಗಿಸುವ ನಿಟ್ಟಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಕಿಸಾನ್ ಮಾಲ್ ಜಿಲ್ಲೆಯಲ್ಲೂ ಆರಂಭ ಆಗಬೇಕು ಎನ್ನುವ ಒತ್ತಾಯ ಸ್ಥಳೀಯರಿಂದ ಕೇಳಿ ಬರುತ್ತಿದೆ. ತೋಟಗಾರಿಕೆ ಕ್ಷೇತ್ರಕ್ಕೆ ಸಂಬAಧಿಸಿದAತೆ ಎಲ್ಲಾ ರೀತಿಯ ಸೇವೆಗಳು ಒಂದೇ ಸೂರಿನಡಿ ಸಿಗುವುದರಿಂದ ಇಲ್ಲಿಯ ಕೃಷಿಕರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಜಿಲ್ಲೆಯಲ್ಲಿ ಕಿಸಾನ್ ಮಾಲ್ ಆರಂಭಿಸಿದರೆ ಸರ್ಕಾರದ ಆಶಯವೂ ಈಡೇರಿದಂತೆ ಆಗಲಿದೆ ಎನ್ನುತ್ತಾರೆ ಇಲ್ಲಿಯ ರೈತರು.
2024-25ರ ಬಜೆಟ್‌ನಲ್ಲಿ ಕಿಸಾನ್ ಮಾಲ್ ಆರಂಭದ ಬಗ್ಗೆ ಪ್ರಕಟವಾದ ನಂತರ ಮೊದಲ ಹಂತದಲ್ಲಿ ಮಂಡ್ಯ ಜಿಲ್ಲೆ ಮದ್ದೂರು ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಈ ಮಾಲ್‌ಗಳು ಕೃಷಿಕರಿಗೆ ಸೇವೆ ಸಲ್ಲಿಸುತ್ತಿವೆ. ಮುಂದಿನ ಹಂತದಲ್ಲಿ ಕಿಸಾನ್ ಮಾಲ್ ತೆರೆಯುವುದಕ್ಕೆ ಸಂಬAಧಿಸಿದAತೆ ಮೈಸೂರು, ಧಾರವಾಡ ಹಾಗೂ ದಾವಣಗೆರೆಯಲ್ಲಿ ಸಿದ್ಧತೆ ಭರದಿಂದ ನಡೆದಿದೆ. ಇದರ ಜತೆಯಲ್ಲೇ ಕೊಡಗಿನಲ್ಲಿಯೂ ಕಿಸಾನ್ ಮಾಲ್ ತೆರೆಯಬೇಕು ಎನ್ನುವುದು ಸ್ಥಳೀಯ ರೈತರ ಬೇಡಿಕೆ ಆಗಿದೆ.
ಕಿಸಾನ್ ಮಾಲ್‌ಗಳಲ್ಲಿ ವಿವಿಧ ಬೆಳೆಗಳ ಕೃಷಿಯ ಕುರಿತು ಸೂಕ್ತ ತಾಂತ್ರಿಕ ಸಲಹೆಗಳನ್ನು ಬೆಳೆಗಾರರಿಗೆ ಒದಗಿಸುವ ಸೌಕರ್ಯವೂ ಇರುತ್ತದೆ. ಶೈಕ್ಷಣಿಕ ಪರಿಣಿತಿ ಹಾಗೂ ವೃತ್ತಿಪರ ಅನುಭವದ ಆಧಾರದ ಮೇಲೆ ಮತ್ತು ತೋಟಗಾರಿಕೆ, ಬೇಸಾಯಶಾಸ್ತ್ರ, ಸಸ್ಯ ರೋಗಶಾಸ್ತ್ರ, ಸಸ್ಯ ಕೀಟಶಾಸ್ತ್ರ, ಮಣ್ಣು ವಿಜ್ಞಾನ ಮೊದಲಾದ ವಿಷಯ ತಜ್ಞರೊಂದಿಗೆ ನಿರಂತರ ಸಂಪರ್ಕ ಸಾಧಿಸಿ, ಬೆಳೆಗಾರರಿಗೆ ಪೋಷಕಾಂಶ, ವಿವಿಧ ಕೀಟ ಮತ್ತು ರೋಗಗಳ ನಿರ್ವಹಣೆ ಮತ್ತಿತರೆ ಕೃಷಿ ಸಂಬAಧಿತ ವಿಷಯಗಳ ಕುರಿತು ಸೂಕ್ತ ಸಲಹೆಗಳನ್ನೂ ಒದಗಿಸಲಾಗುತ್ತದೆ.
ಉತ್ಪನ್ನಗಳ ಮಾರಾಟಕ್ಕೆ ಸರಿಯಾದ ಮಾರ್ಗಗಳ ಕುರಿತು ರೈತರಿಗೆ ಸಲಹೆ ನೀಡುವುದು, ವಿವಿಧ ಬ್ಯಾಂಕುಗಳಿAದ ಸಾಲ ಸೌಲಭ್ಯ ಪಡೆಯಲು, ಸರ್ಕಾರದ ವಿವಿಧ ಇಲಾಖೆಗಳಿಂದ ಸಹಾಯಧನ ಆಧಾರಿತ ವಿವಿಧ ಸವಲತ್ತುಗಳನ್ನು ಪಡೆಯಲು ಅಗತ್ಯವಿರುವ ಯೋಜನಾ ವರದಿ, ಅರ್ಜಿ ಇತ್ಯಾದಿಗಳನ್ನು ಸಿದ್ದಪಡಿಸಿ ಬೆಳೆಗಾರರಿಗೆ ಒದಗಿಸುವ ಸೇವೆಯೂ ಈ ಮಾಲ್‌ಗಳಲ್ಲಿ ಸಿಗುತ್ತದೆ.
ತೋಟಗಾರಿಕೆ ಇಲಾಖೆಯ ವಿವಿಧ ನರ್ಸರಿಗಳು, ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯಗಳು, ಐಐಹೆಚ್‌ಆರ್‌ನಂಥ ಕೇಂದ್ರ ಸರ್ಕಾರದ ಸಂಸ್ಥೆಗಳು, ಖಾಸಗಿ ಸಂಸ್ಥೆಗಳ ನರ್ಸರಿಗಳಲ್ಲಿನ ಉತ್ತಮ ಗುಣಮಟ್ಟದ ಬೀಜ, ಸಸಿಗಳ ಕುರಿತು ಸೂಕ್ತ ಮಾಹಿತಿ ಮತ್ತು ಸಲಹೆಗಳನ್ನು ಕೊಡುವ ಕೆಲಸವನ್ನೂ ಕಿಸಾನ್ ಮಾಲ್‌ಗಳು ಮಾಡುತ್ತವೆ. ಮಣ್ಣು, ನೀರು ಪರೀಕ್ಷೆಗೆ ಸಂಬAಧಿಸಿದ ವರದಿಗಳ ವಿಶ್ಲೇಷಣೆ, ರೈತರಿಗೆ ತರಬೇತಿ, ಕಾರ್ಯಾಗಾರ ಹಾಗೂ ವಿಚಾರಸಂಕಿರಣ, ತೋಟಗಾರಿಕೆ ಉತ್ಪನ್ನಗಳ ಮಾರಾಟಕ್ಕೆ ಸಾಮಾಜಿಕ ಜಾಲತಾಣಗಳ ಬಳಕೆ, ರೈತರ ಪ್ರಶ್ನೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ನೀಡುವ ಕೆಲಸವೂ ಇಲ್ಲಿ ನಡೆಯುತ್ತದೆ.
ಒಂದು ಕಿಸಾನ್ ಮಾಲ್ ಪ್ರಾರಂಭಿಸಲು ಸರ್ಕಾರ ಆರಂಭದಲ್ಲಿ ಒಟ್ಟು 30 ಲಕ್ಷ ರೂ. ಅನುದಾನ ಕೊಡುತ್ತದೆ. ಈ ಅನುದಾನದಲ್ಲಿ ಇಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥಾಪಕರು, ತಾಂತ್ರಿಕ ಸಲಹೆಗಾರರು ಹಾಗೂ ಕಚೇರಿ ಸಿಬ್ಬಂದಿ ವೇತನಕ್ಕೆ 15 ಲಕ್ಷ ರೂ. ವಿನಿಯೋಗಿಸಿದರೆ, ಕಿಸಾನ್ ಮಾಲ್ ಕಟ್ಟಡದ ನವೀಕರಣ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು 15 ಲಕ್ಷ ರೂ. ಬಳಸಬೇಕಾಗುತ್ತದೆ. ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ರೈತ ಉತ್ಪಾದಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಿಸಾನ್ ಮಾಲ್‌ಗಳ ಚಟುವಟಿಕೆಗಳನ್ನು ರೂಪಿಸಲಾಗುತ್ತದೆ.
ಕೊಡಗಿನಲ್ಲೂ ಕಿಸಾನ್ ಮಾಲ್ ಆರಂಭಿಸಬೇಕು ಎನ್ನುವ ಕೃಷಿಕರ ಬೇಡಿಕೆಗೆ ಪೂರಕವಾಗಿ ತೋಟಗಾರಿಕೆ ಇಲಾಖೆಯೂ ಸ್ಪಂದಿಸಿದೆ. ಈ ಹಿನ್ನೆಲೆಯಲ್ಲಿ ಪ್ರಕ್ರಿಯೆಗಳನ್ನು ಆರಂಭಿಸಿರುವ ಇಲಾಖೆ ಜಿಲ್ಲೆಯಲ್ಲಿ ಕಿಸಾನ್ ಮಾಲ್ ಆರಂಭಕ್ಕೆ ಸಂಬAಧಿಸಿದ ಪ್ರಸ್ತಾವನ್ನು ಸರ್ಕಾರಕ್ಕೆ ಕಳುಹಿಸಿದೆ. ರೈತ ಉತ್ಪಾದಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಿಸಾನ್ ಮಾಲ್‌ಗಳು ಕಾರ್ಯನಿರ್ವಹಿಸಬೇಕಿರುವುದರಿಂದ ಅಂತಹ ರೈತ ಉತ್ಪಾದಕ ಸಂಸ್ಥೆಗಳನ್ನು ಗುರುತಿಸುವ ಕೆಲಸವೂ ಪ್ರಗತಿಯಲ್ಲಿದೆ. ಮಡಿಕೇರಿ ಅಥವಾ ಕುಶಾನಗರದಲ್ಲಿ ಕಿಸಾನ್ ಮಾಲ್ ಆರಂಭವಾಗುವ ಸಾಧ್ಯತೆ ಇದೆ. ಬಹುತೇಕ ಮುಂದಿನ ವರ್ಷದಿಂದ ಜಿಲ್ಲೆಯ ಯಾವುದಾದರೂ ಒಂದು ಕಡೆ ಕಿಸಾನ್ ಮಾಲ್ ಶುರುವಾಗಲಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.
2024-25ರ ಬಜೆಟ್‌ನಲ್ಲಿ ಘೋಷಣೆಯಾ ಕಿಸಾನ್ ಮಾಲ್ ಉತ್ತಮ ಯೋಜನೆ ಆಗಿದೆ. ತೋಟಗಾರಿಕೆಯ ಮೂಲ ಅವಶ್ಯಕ ಪರಿಕರಗಳಾದ ಬೀಜ, ಕಸಿ ಮತ್ತು ಸಸಿ ಗಿಡಗಳು, ಸಸ್ಯ ಪೋಷಕಾಂಶ ಮತ್ತು ರಸಗೊಬ್ಬರಗಳು ಮಾತ್ರವಲ್ಲದೆ ಕೃಷಿಕರಿಗೆ ಅಗತ್ಯವಿರುವ ಎಲ್ಲಾ ಸೇವೆಗಳು ಒಂದೇ ಸೂರಿನಡಿಯಲ್ಲಿ ಸಿಗುವುದರಿಂದ ಹೆಚ್ಚಿನ ಅನುಕೂಲ ಆಗುತ್ತದೆ. ಇಂಥ ಕಿಸಾನ್ ಮಾಲ್ ಕೊಡಗಿನಲ್ಲಿ ಕೂಡ ಆರಂಭವಾಗುವ ಅಗತ್ಯವಿದೆ. ಇದರಿಂದ ಕೃಷಿಪ್ರಧಾನ ಕೊಡಗಿನ ರೈತರಿಗೆ ಹೆಚ್ಚಿನ ಅನುಕೂಲ ಆಗುತ್ತದೆ. ಈ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಗಮನಹರಿಸಲಿ.
ಸಿರಕಜೆ ಲೋಕಪ್ರಕಾಶ್, ಕೃಷಿಕ, ತಲಕಾವೇರಿ
ಕೊಡಗಿನಲ್ಲೂ ಕಿಸಾನ್ ಮಾಲ್ ಆರಂಭಕ್ಕೆ ಸಂಬAಧಿಸಿದAತೆ ರೈತರ ಬೇಡಿಕೆ ನಮ್ಮ ಇಲಾಕೆ ಗಮನಕ್ಕೂ ಬಂದಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಕಳಿಸಲಾಗಿದೆ. ಕುಶಾಲನಗರ ಅಥವಾ ಮಡಿಕೇರಿ ಎರಡು ಸ್ಥಳಗಳ ಪೈಕಿ ಯಾವುದಾದರೂ ಒಂದು ಸ್ಥಳದಲ್ಲಿ ಕಿಸಾನ್ ಮಾಲ್ ಮುಂದಿನ ವರ್ಷ ಆರಂಭ ಆಗಲಿದೆ.
ಹೆಚ್. ಶಶಿಧರ್, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ, ಕೊಡಗು