

ಕುಶಾಲನಗರ:
ಕೃಷಿಕರು ನೈಸರ್ಗಿಕ ಕೃಷಿ ಪದ್ಧ್ದತಿಯನ್ನು ಹೆಚ್ಚಾಗಿ ಅನುಸರಿಸುವ ಮೂಲಕ ಮಣ್ಣಿನ ಫಲವತ್ತತೆಯನ್ನು ಸದಾ ಕಾಲ ಸಮೃದ್ದಗೊಳಿಸಬೇಕೆಂದು ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇವಾ ರಾಷ್ಟ್ರೀಯ ಅಧ್ಯಕ್ಷ ಎಂ.ಎನ್. ಕಾಕನೂರ್ ಹೇಳಿದರು. ಗುರುವಾರ ಕುಶಾಲನಗರಕ್ಕೆ ಆಗಮಿಸಿದ ಸಂದರ್ಭ ಸ್ಥಳೀಯ ಯುವ ಕೃಷಿಕರ ತಂಡ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇವಾ ಟ್ರಸ್ಟ್ ದೇಶದ 13 ರಾಜ್ಯಗಳಲ್ಲಿ ಆರಂಭಿಸಲಾಗಿದೆ.
ಹಾಗೆಯೇ ರಾಜ್ಯದಲ್ಲಿಯೂ 25 ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಸಂಘಟನೆಗಳನ್ನು ಕಟ್ಟಿ ಬೆಳೆಸಲಾಗುತ್ತಿದೆ. ಇಂದು ವಿದ್ಯಾವಂತ ಯುವಕರು ಉದ್ಯೋಗ ಅರಸಿ ದೂರದ ನಗರಗಳಿಗೆ ತೆರಳುವುದನ್ನು ತಡೆದು ಸಾವಯವ ಸ್ವಯಂ ಕೃಷಿಯತ್ತ ತೊಡಗಿಸಿಕೊಂಡು ಸ್ವಾವಲಂಬಿಗಳಾಗಲೂ ಜಾಗೃತಿ ಮಾಡಿಸಲಾಗುತ್ತಿದೆ.
ಹಾಗೆಯೇ ರಾಜ್ಯದ ಇನ್ನಿತರ ಜಿಲ್ಲೆಗಳ ಬಡ ರೈತ ಕುಟುಂಬಗಳ ಹೆಣ್ಣು ಮಕ್ಕಳಿಗೆ ಟೈಲರಿಂಗ್ ತರಬೇತಿ, ಯುವಕ ಯುವತಿಯರಿಗೆ ಕಂಪ್ಯೂಟರ್ ಕಲಿಕೆಯ ತರಬೇತಿ ನೀಡಿ ಪ್ರೋತ್ಸಾಹಿಸುವ ಕೆಲಸವಾಗುತ್ತಿದೆ. ಮಣ್ಣಿನ ಆರೋಗ್ಯವನ್ನು ಸಂರಕ್ಷಿಸುವ ಸಲುವಾಗಿ ರಸಾಯನಿಕ ಮುಕ್ತ ಕೃಷಿಗೆ ಒತ್ತು ನೀಡಬೇಕು. ರಸಾಯನಿಕ ಅಳವಡಿಸದೇ ಸಾವಯವ ಕೃಷಿಗೆ ಹೆಚ್ಚು ಉತ್ತೇಜನ ಸಿಗುವಂತಹ ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳಲು ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳನ್ನು ಒತ್ತಾಯಿಸಲಾಗುತ್ತಿದೆ. ಕೃಷಿ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ.
ಕೊಡಗಿನಲ್ಲೂ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇವಾ ಘಟಕವನ್ನು ತೆರೆದು ಸಕ್ರಿಯ ಕಾರ್ಯಕರ್ತರನ್ನು ಸೆಳೆಯಲಾಗುತ್ತಿದೆ ಎಂದರು. ಕಿಸಾನ್ ರಾಜ್ಯ ಯುವ ಘಟಕದ ಅಧ್ಯಕ್ಷ ರಫಿಯುಲ್ಲಾ, ರಾಜ್ಯ ಉಪಾಧ್ಯಕ್ಷೆ ಯಶೋಧ, ಮೈಸೂರು ಜಿಲ್ಲೆಯ ಪ್ರಮುಖರಾದ ಅಬ್ದುಲ್ ಮಲ್ಲಿಕ್, ಕೊಡಗು ಜಿಲ್ಲೆಯ ಪ್ರಮುಖರಾದ ಕಿಂಗ್ಸ್ ವೇ ದಾವುದ್, ಮೈಸೂರು ಜಿಲ್ಲಾ ಕಾರ್ಯದರ್ಶಿ ಸೈಯದ್, ಆಫ್ತಾಬ್, ಅಶ್ರಫ್ ಮೊದಲಾದವರಿದ್ದರು.