

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಕಿರುಷಷ್ಠಿ ಸಾಂಸ್ಕೃತಿಕ ವೈಭವದ ಎರಡನೇ ದಿನ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರಿಂದ ಸಂಗೀತ ಸಂಜೆ ನೆರವೇರಿತು. ಮೂರು ಗಂಟೆ ನಡೆದ ಕಾರ್ಯಕ್ರಮ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರನ್ನು ರಂಜಿಸಿತು.
ಶುಕ್ರವಾರ ಆರಂಭದಲ್ಲಿ ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಅವರಿಂದ ನೃತ್ಯ ಸಂಭ್ರಮ ನೆರವೇರಿತು. ಮೂಡುಬಿದಿರೆಯ ಶ್ರೀ ಆರಾಧನಾ ನೃತ್ಯ ಕೇಂದ್ರದ ಗುರು ವಿದುಷಿ ಸುಖದಾ ಬರ್ವೆ ಶಿಷ್ಯರಿಂದ ನೃತ್ಯ ಸಿಂಚನ ಪ್ರದರ್ಶಿತವಾಯಿತು. ನಟರಾಜ್ ಎಂಟರ್ಟ್ರೈನರ್ಸ್ನಿಂದ ನಡೆದ ಸಂಗೀತ ಸಂಜೆಯಲ್ಲಿ ರಾಜೇಶ್ ಕೃಷ್ಣನ್, ಇತರ ಗಾಯಕರು ಹಾಡಿದರು. ಅವರಿಗೆ ಸುಮಾರು 20ಕ್ಕೂ ಅಧಿಕ ಖ್ಯಾತ ಹಿಮ್ಮೇಳ ವಾದಕರು ಸಹಕಾರ ನೀಡಿದರು. ನಟರಾಜ್ ಶೆಟ್ಟಿಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.
ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಕಲಾವಿದರನ್ನು ಗೌರವಿಸಿದರು. ಸಹಕಲಾವಿದರಿಗೆ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಯೇಸುರಾಜ್ ಗೌರವಿಸಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಮಾಸ್ಟರ್ ಪ್ಲಾನ್ ಸಮಿತಿ ಸ್ಥಳೀಯ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಪವನ್ ಎಂ.ಡಿ., ಅಚ್ಚುತ ಗೌಡ ಬಳ್ಪ, ಎಸ್ಎಸ್ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್, ದೇವಳದ ಸಿಬ್ಬಂದಿ ಉಪಸ್ಥಿತರಿದ್ದರು. ಹಿರಿಯ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್ ಮತ್ತು ಉಪನ್ಯಾಸಕಿ ಶ್ರುತಿ ನಿರೂಪಿಸಿದರು.