ಕಿರು ಉದ್ದಿಮೆಗಳ ಭರಾಟೆ!

28Manju2b-web
ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರು ಆಹಾರ ಸಂಸ್ಕರಣಾ ಕಿರು ಉದ್ಯಮ ಪರಿಶೀಲಿಸುತ್ತಿರುವ ಅಧಿಕಾರಿಗಳ ತಂಡ.
Published on

ಬೆಳಗಾವಿ: ಅನಾವೃಷ್ಟಿ, ಅತಿವೃಷ್ಟಿ, ಕೃಷಿ ಸಲಕರಣೆ ಬಾಡಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಹಳ್ಳಿಗಳಲ್ಲಿ ಇದೀಗ ಕಿರು ಉದ್ದಿಮೆಗಳ ಸ್ಥಾಪನೆ ಹೆಚ್ಚಿದ ಬೇಡಿಕೆ. ಒಂದೇ ವರ್ಷದಲ್ಲಿ 418 ಆಹಾರ ಸಂಸ್ಕರಣಾ ಘಟಕಗಳು ಆರಂಭವಾಗಿವೆ.

ರೈತರು ತಮ್ಮ ಕೃಷಿ ಜಮೀನುಗಳಲ್ಲಿ ಬೆಳೆಯುತ್ತಿರುವ ಆಹಾರ ಪದಾರ್ಥಗಳ ಉತ್ಪಾದನೆ ಪ್ರೋತ್ಸಾಹಿಸುವುದು, ಸೂಕ್ತ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಹಾಗೂ ಆಹಾರ ಉತ್ಪನ್ನಗಳ ಕಿರು ಉದ್ಯಮ ಆರಂಭಿಸುವವರನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರ 2020-21ನೇ ಸಾಲಿನಲ್ಲಿ ಅನುಷ್ಠಾನಗೊಳಿಸಿರುವ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಅಡಿ ಕಿರು ಉದ್ದಿಮೆಗಳ ಸ್ಥಾಪನೆ ಹಳ್ಳಿಗಳಲ್ಲಿ ಬೇಡಿಕೆ ಹೆಚ್ಚಿದೆ. ಅಲ್ಲದೆ, 2020-23 ಸಾಲಿನ ನಡುವಿನ ಅವಧಿಯಲ್ಲಿ ಬರೋಬ್ಬರಿ 2,450ಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗಿವೆ.

ಈ ಮೊದಲು ಕೇಂದ್ರ ಸರ್ಕಾರದ ಆತ್ಮನಿರ್ಭರ್ ಭಾರತದ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಅಡಿಯಲ್ಲಿ ಬೆಳಗಾವಿ ಜಿಲ್ಲೆಗೆ ಬೆಲ್ಲ (ರಾಸಾಯನಿಕ ಮುಕ್ತ ಬೆಲ್ಲ) ಉತ್ಪನ್ನ ಆಯ್ಕೆ ಮಾಡಲಾಗಿತ್ತು. ಆದರೆ, ಯಾವುದೇ ರೈತರು ಬೆಲ್ಲದ ಘಟಕ ಸ್ಥಾಪನೆಗೆ ಆಸಕ್ತಿ ತೋರಲಿಲ್ಲ. ಈ ಹಿನ್ನೆಲೆಯಲ್ಲಿ 2022-23ನೇ ಸಾಲಿನ ಅವಧಿಯಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಅಡಿಯಲ್ಲಿ ಎಲ್ಲ ಆಹಾರ ಪದಾರ್ಥಗಳ ಘಟಕಗಳ ಸ್ಥಾಪನೆಗೆ ಅವಕಾಶ ಕಲ್ಪಿಸಿಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ರೈತರು, ಬಡವರು, ಕಾರ್ಮಿಕ ಮಹಿಳೆಯರು ವಿವಿಧ ಕಿರು ಉದ್ಯಮಗಳ ಸ್ಥಾಪನೆಗೆ ಮುಂದಾಗಿದ್ದಾರೆ. ಹಾಗಾಗಿ, ಒಂದೇ ವರ್ಷದಲ್ಲಿ ಕಿರು ಉದ್ಯಮಗಳ ಬೇಡಿಕೆ ದುಪ್ಪಟ್ಟಾಗಿದೆ.

ನಾಲ್ಕೈದು ವರ್ಷ ಅವಧಿಯಲ್ಲಿ ರಾಸಾಯನಿಕ ಮುಕ್ತ ಬೆಲ್ಲ ಉತ್ಪಾದನೆಯಲ್ಲಿ ಶೇ.80 ಕುಸಿತ ಕಂಡಿದೆ. ಮತ್ತೊಂದೆಡೆ ಸಾವಯವ ಬೆಲ್ಲ ತಯಾರಿಕೆಗೆ ಹಿನ್ನೆಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಆತ್ಮ ನಿರ್ಭರ್ ಯೋಜನೆಯಡಿಯಲ್ಲಿ ಕಬ್ಬು ಅಧಿಕ ಪ್ರಮಾಣದಲ್ಲಿ ಬೆಳೆಯುವ ಭಾಗಗಳಲ್ಲಿ ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ ಘಟಕಗಳ ಸ್ಥಾಪನೆಗೆ ಆದ್ಯತೆ ನೀಡುತ್ತಿದೆ. ಜತೆಗೆ ರಾಸಾಯನಿಕ ಮುಕ್ತ ಅಡುಗೆ ಎಣ್ಣೆ ತಯಾರಿಕೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸಾವಯವ ಉದ್ಯಮಕ್ಕೆ ಸಿಂಹಪಾಲು

ಜಿಲ್ಲೆಯಲ್ಲಿ ಬೇಕರಿ- 30, ಗೊಡಂಬಿ-18, ಮೆಣಸಿನ ಪುಡಿ- 33, ಎಣ್ಣೆಗಾಣ- 31, ಹಾಲು ಆಧಾರಿತ - 23,ರೊಟ್ಟಿ, ಚಪಾತಿ ತಯಾರಿಕೆ- 106, ತಿನಿಸು ತಯಾರಿಕೆ- 9, ಹುಣಸೆ ಹಣ್ಣಿನ ಘಟಕ- 2, ತೊಗರಿ ಬೆಳೆ ಘಟಕ- 3, ಅರಿಶಿಣ ಪುಡಿ- 11, ಶಾವಿಗೆ ತಯಾರಿಕೆ- 5, ಬೆಲ್ಲ ತಯಾರಿಕೆ - 26, ಚಿಪ್ಸ್ ತಯಾರಿಕೆ-26, ಸಾವಯವ ಉದ್ಯಮ - 69, ಪಶು ಆಹಾರ- 6, ಹಿಟ್ಟಿಣ ಗಿರಣಿ-2,ಉಪ್ಪಿನ ಕಾಯಿ-2 ಸೇರಿ ಒಟ್ಟು 418 ಕಿರು ಉದ್ದಿಮೆಗಳು ಕಾರ್ಯನಿರ್ವಹಿಸುತ್ತಿವೆ.

ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ಸ್ಥಾಪನೆಯಲ್ಲಿ ಬೆಳಗಾವಿ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಘಟಕಗಳ ಸ್ಥಾಪನೆಗೆ ಬ್ಯಾಂಕ್‌ಗಳಿಂದ 33.22 ಕೋಟಿ ರೂ. ಸಾಲ ಮಂಜೂರಾಗಿದೆ. ಗಾಣದ ಎಣ್ಣೆ ತಯಾರಿಕೆ, ರೊಟ್ಟಿ ತಯಾರಿಕೆ ಘಟಕಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ.| ಶಿವನಗೌಡ ಎಸ್.ಪಾಟೀಲ, ಜಿಲ್ಲಾ ಜಂಟಿ ನಿರ್ದೇಶಕ, ಕೃಷಿ ಇಲಾಖೆ

| ಮಂಜುನಾಥ ಕೋಳಿಗುಡ್ಡ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net