ಅಂತರ್ಗತ ಕಲಿಕೆ ಮನಸ್ಸಿಗೆ ಅಚ್ಚೊತ್ತಿದಂತೆ,  ಕಿರೇಸೂರಿನಲ್ಲಿ ತೆರೆದ ವಾಚನಾಲಯ ಉದ್ಘಾಟಿಸಿದ ಡಾ. ರಾಮು ಮೂಲಗಿ ಅಭಿಮತ

Published on

ಹುಬ್ಬಳ್ಳಿ: ಅನುಭವದ ಕಲಿಕೆಯು ಅತ್ಯಂತ ಪರಿಣಾಮಕಾರಿ ಶೈಕ್ಷಣಿಕ ವಿಧಾನ. ಶಿಕ್ಷಕರು ಕಲೆಯನ್ನು ಅಂತರ್ಗತಗೊಳಿಸಿ ಬೋಧಿಸಬೇಕು. ಅಂತರ್ಗತ ಕಲಿಕೆಯು ಮಕ್ಕಳ ಮನಸ್ಸಿನಲ್ಲಿ ಅಚ್ಚೊತ್ತಿದಂತೆ ಎಂದು ಜಾನಪದ ತಜ್ಞ ಡಾ. ರಾಮು ಮೂಲಗಿ ಅಭಿಪ್ರಾಯಪಟ್ಟರು.

ತಾಲೂಕಿನ ಕಿರೇಸೂರ ಗ್ರಾಮದಲ್ಲಿ ಡಿಎಸ್ಇಆರ್ಟಿ ಸಹಯೋಗದಲ್ಲಿ ಇಂಡಿಯಾ ಫಾಂಡೇಷನ್ ಫಾರ್ ಆರ್ಟ್ಸ್ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಕಲಿಕಾ ಕೇಂದ್ರವಾಗಿ ಅರಳೀಕಟ್ಟೆ ತೆರೆದ ವಾಚನಾಲಯ ಉದ್ಘಾಟಿಸಿ ಹಾಗೂ ಮಕ್ಕಳು ತಯಾರಿಸಿದ ಗಾಳಿಪಟ ಪ್ರದರ್ಶಿಸಿ ಅವರು ಮಾತನಾಡಿದರು.

ಕಲೆ ಇಲ್ಲದೇ ಜೀವನವಿಲ್ಲ, ಕಲೆಯು ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗಿದೆ. ಜಾನಪದ, ಸಂಗೀತ, ನಾಟಕ, ಚಿತ್ರ, ಬರವಣಿಗೆ, ಅಭಿನಯ, ಹಾಡುಗಾರಿಕೆ, ಭಾಷಣ, ಮಣ್ಣಿನ ಮಾದರಿ ಇತ್ಯಾದಿ ಕಲೆಗಳನ್ನು ಮಕ್ಕಳು ಹೊಂದುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದರು.

ಗಾಳಿಪಟ ತಯಾರಿಕಾ ಕಾರ್ಯಾಗಾರದ ನಿರ್ವಾಹಕ ಡಾ. ಲಿಂಗರಾಜ ರಾಮಾಪೂರ ಮಾತನಾಡಿ, ವಿವಿಧ ಕಲಾ ಪ್ರಕಾರಗಳನ್ನು ಪರಿಚಯಿಸುವುದರ ಮೂಲಕ ಮಕ್ಕಳಲ್ಲಿ ಓದುವ ಸದಭಿರುಚಿ ಬೆಳೆಸುವುದು ಯೋಜನೆಯ ಉದ್ದೇಶವಾಗಿದೆ ಎಂದರು.

ಹಿರಿಯ ಶಿಕ್ಷಕಿ ಜಯಶ್ರೀ ಎಂ. ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಗಣ್ಯರಾದ ವೈ.ಎಸ್. ರೇವಡಿಹಾಳ, ಮಂಜುನಾಥ ಹುಬ್ಬಳ್ಳಿ, ಎಂ.ವೈ. ಸವದತ್ತಿ, ಶಿಕ್ಷಕರಾದ ಶಂಭುಲಿಂಗಪ್ಪ ಪೂಜಾರ, ಮಂಗಳಾ ಕಮ್ಮಾರ ಉಪಸ್ಥಿತರಿದ್ದರು.

ರ್ಪೂಣಿಮಾ ಹಾಗೂ ಸಂಗಡಿಗರು ಸಂವಿಧಾನ ಗೀತೆ ಹಾಡಿದರು. ಕನ್ನಡ ಶಿಕ್ಷಕ ಅಶೋಕ ಈರಗಾರ ಸ್ವಾಗತಿಸಿದರು. ಸಮಾಜ ವಿಜ್ಞಾನ ಶಿಕ್ಷಕ ಚಂದ್ರಶೇಖರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net