

ಬೆಂಗಳೂರು: ಗಂಗಾನಗರದಲ್ಲಿರುವ ಸೈನ್ಸ್ ಗ್ಯಾಲರಿಯಲ್ಲಿ ಹಮ್ಮಿಕೊಂಡಿರುವ ‘ಕ್ಯಾಲೋರಿ - ದಿ ಬ್ರೇಕ್ಡೌನ್’ ವಿಶೇಷ ಆಹಾರ ಸಂಸ್ಕೃತಿ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ದೊರೆಯಿತು. 2026ರ ಆಗಸ್ಟ್ ವರೆಗೆ ಒಂದು ವರ್ಷ ನಡೆಯಲಿರುವ ಪ್ರದರ್ಶನಕ್ಕೆ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಡಾ.ಕಿರಣ್ ಮಜೂಂದಾರ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ನಾವು ಏನನ್ನು ತಿನ್ನುತ್ತೇವೆ, ಹೇಗೆ ಜೀರ್ಣಿಸಿಕೊಳ್ಳುತ್ತೇವೆ ಮತ್ತು ಹೇಗೆ ಆರೋಗ್ಯವಾಗಿರುತ್ತೇವೆ ಎಂಬುದನ್ನು ತಿಳಿದುಕೊಂಡಿರಬೇಕು. ಕ್ಯಾಲೋರಿ ಎಂದರೆ ಸೇವನೆ ಮಾಡಿದ ಆಹಾರದಿಂದ ಉತ್ಪತ್ತಿಯಾಗುವ ಶಕ್ತಿ. ಅದೇ ಹೆಸರಿನಿಂದ ಸೈನ್ಸ್ ಗ್ಯಾಲರಿ ಪ್ರದರ್ಶನ ಆಯೋಜಿಸಿರುವ ವಿಶೇಷ. ನಮ್ಮ ಎಲ್ಲ ಸಾಧನೆಗೆ ನಾವು ಸೇವಿಸುವ ಆಹಾರ ಮತ್ತು ಅದರಿಂದ ಉತ್ಪತ್ತಿಯಾಗುವ ಕ್ಯಾಲೋರಿ ಮುಖ್ಯವಾಗಿದೆ. ಅದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಈ ಪ್ರದರ್ಶನ ಬಹಳ ಉಪಯುಕ್ತವಾಗಿದೆ. ನಾವು ಸಂಪನ್ಮೂಲಗಳನ್ನು ಹೇಗೆ ಬಳಸುತ್ತೇವೆ, ಬೆಳೆಗಳನ್ನು ಹವಾಮಾನ ಬದಲಾವಣೆಗೆ ಅನುಗುಣವಾಗಿ ಹೇಗೆ ಬೆಳೆಯುತ್ತೇವೆ, ನಮ್ಮ ಮೂಲ ಸಂಸ್ಕೃತಿಗೆ ಭಿನ್ನವಾಗಿ ಬದಲಾದ ಆಹಾರ ಪದ್ಧತಿಗಳ ಬಗ್ಗೆ ಇಂದಿನ ಯುವ ಜನಾಂಗಕ್ಕೆ ಅರ್ಥ ಮಾಡಿಸಲು ಈ ಪ್ರದರ್ಶನ ಯಶಸ್ವಿಯಾಗಲಿದೆ ಎಂಬುದು ನನ್ನ ವಿಶ್ವಾಸ. ಮುಂದಿನ ದಿನಗಳಲ್ಲಿ ಕಾರ್ಯಾರಂಭ ಮಾಡುವ ಆಹಾರ ಪ್ರಯೋಗಾಲಯವು ನಾವೀನ್ಯತೆಗೆ ಸ್ಫೂರ್ತಿ ನೀಡುವುದು ಮತ್ತು ಆರೋಗ್ಯಕರ, ಹೆಚ್ಚು ಸುಸ್ಥಿರ ಭವಿಷ್ಯವನ್ನು ಮುನ್ನಡೆಸುವ ಗುರಿ ಹೊಂದಿದೆ ಎಂದು ವಿವರಿಸಿದರು.
ಸಮಾರಂಭದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಏಕರೂಪ್ ಕೌರ್, ಸೈನ್ಸ್ ಗ್ಯಾಲರಿ ನಿರ್ದೇಶಕಿ ಡಾ. ಜಾಹ್ನವಿ ಪಾಲ್ಕೆ ಮತ್ತಿತರರು ಉಪಸ್ಥಿತರಿದ್ದರು.
ನಮ್ಮ ಊಟದ ತಟ್ಟೆಯಲ್ಲಿರುವುದು ಕೇವಲ ಆಹಾರ ಮಾತ್ರವಲ್ಲ, ಅದನ್ನು ಮೀರಿದ ಒಂದು ದೊಡ್ಡ ವ್ಯವಸ್ಥೆ. ಈ ಹಿನ್ನೆಲೆಯಲ್ಲಿಯೇ ಆಹಾರದ ಹಿಂದಿರುವ ವಿಜ್ಞಾನ, ಸಂಸ್ಕೃತಿ ಮತ್ತು ಪ್ರಯೋಗಶೀಲತೆಯನ್ನು ಒಳಗೊಂಡ ುಡ್ ಸೈಕಲ್ ಬಗ್ಗೆ ಅರಿವು ಮೂಡಿಸಲು ಕ್ಯಾಲೋರಿ ಪ್ರದರ್ಶನವನ್ನು ಏರ್ಪಡಿಸಿರುವುದಾಗಿ ಸೈನ್ಸ್ ಗ್ಯಾಲರಿ ನಿರ್ದೇಶಕರಿ ಡಾ.ಜಾಹ್ನವಿ ತಿಳಿಸಿದ್ದಾರೆ.
ಈ ಪ್ರದರ್ಶನ ಬೇರೆಲ್ಲ ಪ್ರದರ್ಶನಗಳಂತಿರದೆ ಇಲ್ಲಿಗೆ ಆಗಮಿಸುವ ಜನರೊಂದಿಗೆ ಸಂವಾದ, ಚರ್ಚೆ, ಕಾರ್ಯಾಗಾರ, ಉಪನ್ಯಾಸ ಹಾಗೂ ಆಹಾರ ಮೇಳಗಳನ್ನು ಒಂದು ವರ್ಷದ ಪರ್ಯಂತರ ನಡೆಸಲಾಗುತ್ತದೆ. ಉತ್ಪಾದನೆ, ಮಾರುಕಟ್ಟೆ, ಆಹಾರ ತಯಾರಿಕೆ, ಸೇವನೆ, ಪಚನ ಹಾಗೂ ಆಹಾರದ ತ್ಯಾಜ್ಯ ಪ್ರತಿಯೊಂದ ಅಂಶಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ತೋರಿಸಿ ಜನರಿಗೆ ಅರಿವು ಮೂಡಿಸುವುದು ಸೈನ್ಸ್ ಗ್ಯಾಲರಿಯ ಉದ್ದೇಶ. ಸಾರ್ವಜನಿಕರಿಗೆ ಈ ಪ್ರದರ್ಶನ ಸಂಪೂರ್ಣ ಉಚಿತವಾಗಿದ್ದು, 15 ರಿಂದ 30 ವರ್ಷ ವಯೋಮಾನದವರನ್ನು ಗುರಿಯಾಗಿಸಿಕೊಳ್ಳಲಾಗಿದೆ. ಈ ಪ್ರದರ್ಶನದಲ್ಲಿ ತಜ್ಞ ತಂಡದ ಸದಸ್ಯರು ಮಾಹಿತಿ ನೀಡಲಿದ್ದಾರೆ ಎಂದು ಡಾ.ಜಾಹ್ನವಿ ವಿವರಿಸಿದರು.