

ಅರಸೀಕೆರೆ ಗ್ರಾಮಾಂತರ: ಪ್ರಗತಿಪರ ಚಿಂತಕ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ನಿಲುವುಗಳಿಂದ ಚಿರಪರಿಚಿತರಾಗಿರುವ ತಾಲೂಕಿನ ಬಾಳೆಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಎಚ್.ಆರ್.ಸ್ವಾಮಿ ಅವರು ಕಿರಂ ಪ್ರಶಸ್ತಿಗೆ ಭಾಜನಾಗಿದ್ದಾರೆ.
ಬೆಂಗಳೂರಿನ ಜನಸಂಸ್ಕೃತಿ ಪ್ರತಿಷ್ಠಾನ ಆರ್ಟ್ ಫೌಂಡೇಷನ್‌ನಿಂದ ಪ್ರಶಸ್ತಿ ಕೊಡ ಮಾಡಲಾಗುತ್ತಿದ್ದು, ಪರಿಸರ ವೈಚಾರಿಕತೆ ಮತ್ತು ರಂಗ ಭೂಮಿಯಲ್ಲಿನ ಸೇವೆಗಾಗಿ ಈ ಪ್ರಶಸ್ತಿ ದೊರೆತಿದೆ. ಆ.7ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸ್ವಾಮಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಪ್ರಶಸ್ತಿ ಹಿರಿಮೆಯನ್ನು ಹೆಚ್ಚಿಸುತ್ತದೆ ಎನ್ನುವುದಕ್ಕಿಂತ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಮತ್ತಷ್ಟು ಪ್ರೇರೇಪಿಸುತ್ತದೆ ಎಂಬುದು ನನ್ನ ಭಾವನೆ ಎಂದು ಸ್ವಾಮಿ ವಿಜಯವಾಣಿಗೆ ತಿಳಿಸಿದರು.
ಕಿರಂ ಪ್ರಶಸ್ತಿಗೆ ಭಾಜನರಾಗಿರುವ ಡಾ.ಎಚ್.ಆರ್.ಸ್ವಾಮಿ ಅವರು ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಪರಿಸರ ಕ್ಷೇತ್ರದಲ್ಲಿ, ಮೂಢನಂಬಿಕೆಗಳ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅವರು ನಡೆಸಿರುವ ಹೋರಾಟ, ರಂಗಭೂಮಿ ಕಲೆಯಲ್ಲಿ ಅವರಿಗಿರುವ ಆಸಕ್ತಿ ಯುವ ಸಮುದಾಯಕ್ಕೆ ಆದರ್ಶ ಎಂದು ತಾಲೂಕು ದಂಡಾಧಿಕಾರಿ ಸಂತೋಷ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.