ಕಿಯೋನಿಕ್ಸ್ ಅಧ್ಯಕ್ಷರಾಗಿ ಹರಿಕೃಷ್ಣ ಬಂಟ್ವಾಳ್

harikrishna new
Published on

ಬಂಟ್ವಾಳ: ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್) ಅಧ್ಯಕ್ಷರಾಗಿ ಹರಿಕೃಷ್ಣ ಬಂಟ್ವಾಳ್ ನೇಮಕಗೊಂಡಿದ್ದಾರೆ.

ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧೀನ ಕಾರ್ಯದರ್ಶಿ ಸಿದ್ರಾಮಪ್ಪ ತಳವಾರ ಅಧಿಸೂಚನೆ ಹೊರಡಿಸಿದ್ದು, ಜೂ.12ರಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಹರಿಕೃಷ್ಣ ಕಳೆದ ಚುನಾವಣೆ ವೇಳೆ ರಾಜೇಶ್ ನಾಕ್ ಉಳಿಪ್ಪಾಡಿ ಬಂಟ್ವಾಳ ಕ್ಷೇತ್ರದಲ್ಲಿ ವಿಜಯಿಯಾಗುವಲ್ಲಿ ಹಾಗೂ ಬಳಿಕ ನಳಿನ್ ಕುಮಾರ್ ಕಟೀಲ್ ಗೆಲುವಿನ ಹಿಂದೆ ಪ್ರಮುಖ ಪಾತ್ರವಹಿಸಿದ್ದರು. ಕಾಂಗ್ರೆಸ್‌ನಿಂದ ಬಿಜೆಪಿ ಸೇರ್ಪಡೆಗೊಂಡ ಬಳಿಕ ಪಕ್ಷದ ಜಿಲ್ಲಾ ವಕ್ತಾರ, ಬಳಿಕೆ ಜಿಲ್ಲಾ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಬಿಲ್ಲವ ಸಮಾಜ ಸಂಘಟನೆಯಲ್ಲೂ ಮುಂಚೂಣಿಯಲ್ಲಿದ್ದಾರೆ.

ಕಿಯೋನಿಕ್ಸ್ ಐಎಸ್‌ಒ ಪ್ರಮಾಣಿತ ಸಂಸ್ಥೆಯಾಗಿದ್ದು, ರಾಜ್ಯದಲ್ಲಿ ವಿದ್ಯುನ್ಮಾನ ಉದ್ಯಮಗಳನ್ನು ಉತ್ತೇಜಿಸಲು ಹಾಗೂ ಈ ಉದ್ಯಮಗಳನ್ನು ಮುಂಚೂಣಿಯಲ್ಲಿಟ್ಟು ಜನಸಾಮಾನ್ಯರಿಗೆ ಮಾಹಿತಿ ತಂತ್ರಜ್ಞಾನ ಶಿಕ್ಷಣ ನೀಡುವ ರಾಜ್ಯದ ಇ-ಅಡಳಿತ ಸೇವೆಗಳನ್ನು ಒದಗಿಸುವ ಮೂಲ ಉದ್ದೇಶವನ್ನಿಟ್ಟು ಕೊಂಡು 1976ರಲ್ಲಿ ಸ್ಥಾಪನೆಯಾಗಿದೆ. ರಾಜ್ಯದಲ್ಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಬಂಧಿತ ಕೈಗಾರಿಕೆಗಳಿಗೆ ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬದ್ಧವಾಗಿದ್ದು, ಮಾಹಿತಿ ತಂತ್ರಜ್ಞಾನ ಉದ್ಯಮಗಳಿಗೆ ಇಂಟರ್ನೆಟ್ ಸಂಪರ್ಕ ಕಲ್ಪಿಸುವುದು ಹಾಗೂ ರಫ್ತು ಆಧಾರಿತ ಯೋಜನೆಗಳನ್ನು ಉತ್ತೇಜಿಸಲು ಸಹಕರಿಸುತ್ತಿದೆ. ಇಂಥ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಇದಕ್ಕೆ ಕಾರಣಕರ್ತರಾದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರಿಗೆ ಹಾಗೂ ಪಕ್ಷದ ಎಲ್ಲ ನಾಯಕರಿಗೆ ಕೃತಜ್ಞತೆ.

- ಹರಿಕೃಷ್ಣ ಬಂಟ್ವಾಳ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net