

ಕಿನ್ನಿಗೋಳಿ: ಪುರಾಣ ಕಥೆಗಳನ್ನು ಯಕ್ಷಗಾನದ ಮೂಲಕವಾಗಿ ಜನರಿಗೆ ಮುಟ್ಟಿಸಿ ಸತ್‌ಚಿಂತನೆ ಜಾಗೃತಿಗೊಳಿಸುವ ಕೆಲಸ ಯಕ್ಷಲಹರಿ ಸಂಸ್ಥೆ ಮೂಲಕ ನಡೆಯುತ್ತಿದೆ ಎಂದು ಕರ್ಣಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್ ವಿನಯ್ ಭಟ್ ಹೇಳಿದರು.
ಕಿನ್ನಿಗೋಳಿಯ ಯಕ್ಷಲಹರಿ, ಯುಗಪುರುಷದ ಆಶ್ರಯದಲ್ಲಿ ಯಕ್ಷಲಹರಿಯ 32 ವರ್ಷದ ಸಂಭ್ರಮ ಪ್ರಯುಕ್ತ ಕರ್ಣಾಟಕ ಬ್ಯಾಂಕ್ ಯಕ್ಷಗಾನ ತಾಳಮದ್ದಳೆ ಸಪ್ತಾಹ ಏತದ್ಧಿ ರಾಮಾಯಣಂ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶ್ರೀಕ್ಷೇತ್ರ ಕಟೀಲಿನ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ ಮಾತನಾಡಿ, ತಾಳಮದ್ದಳೆಯ ಮೂಲಕವಾಗಿ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವ ಕೆಲಸ ನಡೆಯುತ್ತಿದೆ ಎಂದರು.
ಕಲಾಪೋಷಕರ ನೆಲೆಯಲ್ಲಿ ದೊಡ್ಡಯ್ಯ ಬಂಗೇರ ನಿಡ್ಡೋಡಿ, ಕಲಾವಿದರ ನೆಲೆಯಲ್ಲಿ ಶ್ಯಾಮಸುಂದರ ರಾವ್ ಪಯ್ಯಡಿ, ಡಾಕ್ಟರೇಟ್ ಪದವಿ ಪಡೆದ ಡಾ.ಹರಿಕೃಷ್ಣ ಪುನರೂರು ಅವರನ್ನು ಗೌರವಿಸಲಾಯಿತು. ಪುನರೂರು ವಿಶ್ವನಾಥ ದೇವಸ್ಥಾನ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್, ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕಿನ್ನಿಗೋಳಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷೆ ಹಿಲ್ದಾ ಮಿನೇಜಸ್, ರೋಟರಿ ಕ್ಲಬ್ ಅಧ್ಯಕ್ಷೆ ದೇವಿದಾಸ ಶೆಟ್ಟಿ, ಉದ್ಯಮಿ ನಾಗರಾಜ ಆಚಾರ್ಯ, ವೇದವ್ಯಾಸ ರಾವ್, ರಾಮ ಹೊಳ್ಳ, ಶಶಿಧರ ರಾವ್, ವಿನಯ್ ಆಚಾರ್ ಹೊಸಬೆಟ್ಟು, ಉಮೇಶ ನೀಲಾವರ, ಸುಧಾಕರ ಕುಲಾಲ್ ಉಪಸ್ಥಿತರಿದ್ದರು. ಯಕ್ಷಗಾನ ಕಲಾವಿದ ಮಕ್ಕಳಿಗೆ ದತ್ತಿನಿಧಿ ವಿದ್ಯಾರ್ಥಿವೇತನ ವಿತರಿಸಲಾಯಿತು. ಯಕ್ಷಲಹರಿ ಅಧ್ಯಕ್ಷ ರಘುನಾಥ್ ಕಾಮತ್ ಕೆಂಚನಕೆರೆ ಸ್ವಾಗತಿಸಿದರು. ಯುಗಪುರುಷದ ಭುವನಾಭಿರಾಮ ಪ್ರಸ್ತಾವನೆಗೈದರು. ಶ್ರೀವತ್ಸ ಎಸ್.ಆರ್, ಆಕಾಶ್ ರಾವ್ ಸನ್ಮಾನ ಪತ್ರ ವಾಚಿಸಿದರು. ಅಶ್ವತ್ಥ ರಾವ್ ವಿದ್ಯಾರ್ಥಿವೇತನ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ವಸಂತ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಪಶುಪತಿ ಶಾಸ್ತ್ರಿ ವಂದಿಸಿದರು.