ಕಿನ್ನಿಗೋಳಿಗೆ ಪಟ್ಟಣ ಪಂಚಾಯಿತಿ ಪಟ್ಟ ಶೀಘ್ರ

kinnigoli new
Published on

ಕಿನ್ನಿಗೋಳಿ: ಮಳವೂರು ಮತ್ತು ಬಜ್ಪೆ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಯಾಗಿ ಪರಿವರ್ತಿಸುವುದಕ್ಕೆ ಗುರುವಾರ ಕ್ಯಾಬಿನೆಟ್‌ನಲ್ಲಿ ಅನುಮೋದನೆ ದೊರೆತಿದೆ. ಆದರೆ ಕಿನ್ನಿಗೋಳಿ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಒಗ್ಗೂಡಿಸಿ ಪಟ್ಟಣ ಪಂಚಾಯಿತಿಯಾಗಿಸುವ ಪ್ರಯತ್ನಕ್ಕೆ ಕೆಲ ಕಾರಣಗಳಿಂದ ಅನುಮೋದನೆ ದೊರೆತಿಲ್ಲ. ಶೀಘ್ರದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಶಾಸಕರು ತಿಳಿಸಿದ್ದಾರೆ.

2019ರಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಮೂಲಕ ಕಿನ್ನಿಗೋಳಿ ಮತ್ತು ಮೆನ್ನಬೆಟ್ಟು ಪಂಚಾಯಿತಿಯನ್ನು ಒಟ್ಟುಗೂಡಿಸಿ ಪಟ್ಟಣ ಪಂಚಾಯಿತಿಯಾಗಿ ಪರಿವರ್ತಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ವರ್ಷ ಅದಕ್ಕೆ ಅಗತ್ಯ ಮಾಹಿತಿಯೊಂದಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು 1 ಸಾವಿರ ಜನಸಂಖ್ಯೆ, ವ್ಯಾಪ್ತಿಯ ಪ್ರತಿ ಪಂಚಾಯಿತಿಗೆ ವಾರ್ಷಿಕ 9 ಲಕ್ಷ ರೂ. ಆದಾಯ ಅಗತ್ಯವಾಗಿದ್ದು, ಶೇಕಡ 50ಕ್ಕಿಂತ ಹೆಚ್ಚು ಕೃಷಿಯೇತರ ಆದಾಯ ಇರುವ ಪ್ರದೇಶ ಇರಬೇಕು ಎಂಬ ನಿಯಮವಿದೆ. 2011 ರ ಜನಗಣತಿ ಪ್ರಕಾರ ಕಿನ್ನಿಗೋಳಿ ಪಂಚಾಯಿತಿ 8126 ಜನಸಂಖ್ಯೆ ಹೊಂದಿದ್ದು, ಮೆನ್ನಬೆಟ್ಟು ಪಂಚಾಯಿತಿ 4372 ಜನಸಂಖ್ಯೆ ಹೊಂದಿದೆ. 2020 ರಲ್ಲಿ ಮೆನ್ನಬೆಟ್ಟು, ಕಿನ್ನಿಗೋಳಿ ಪಂಚಾಯಿತಿ ಜೊತೆ ಕಟೀಲು ಪಂಚಾಯಿತಿಯನ್ನು ಸೇರಿಸಿ ಪ್ರಸ್ತಾವನೆ ಕಳುಹಿಸಲಾಗಿದ್ದು ಮೂರು ಪಂಚಾಯಿತಿಗಳಲ್ಲಿ ಕಟೀಲು ಪಂಚಾಯಿತಿಯಲ್ಲಿ ಕೃಷಿ ಚಟುವಟಿಕೆ ಹೆಚ್ಚಿದೆ.

ಅಭಿವೃದ್ಧಿಗೆ ಅವಕಾಶ: ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದಲ್ಲಿ ಕಿನ್ನಿಗೋಳಿ, ಮೆನ್ನಬೆಟ್ಟು ಪ್ರದೇಶಗಳು ಅಭಿವೃದ್ಧಿ ಹೊಂದಲಿವೆ. ವಾಣಿಜ್ಯ ಮತ್ತು ಮನೆ ತೆರಿಗೆ ಹೆಚ್ಚಾಗಲಿದ್ದು ಪಂಚಾಯಿತಿ ಆದಾಯದ ಜತೆಗೆ, ಪಟ್ಟಣ ಪಂಚಾಯಿತಿಗೆ ವಾರ್ಷಿಕ ಸುಮಾರು 2 ಕೋಟಿ ರೂ. ಅನುದಾನ ಬರಲಿದೆ. ಕಿನ್ನಿಗೋಳಿಯನ್ನು ಕಾಡುತ್ತಿರುವ ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರು ಮತ್ತಿತರ ಸಮಸ್ಯೆ ನೀಗಲಿದೆ.

ಕೃಷಿ ಪೂರಕ ಅನುದಾನ ತೊಂದರೆ: ಮೂರು ಪಂಚಾಯಿತಿಗಳಲ್ಲಿ ಕಟೀಲು ಪಂಚಾಯಿತಿ ಅತೀ ಹೆಚ್ಚು ಕೃಷಿ ಚಟುವಟಿಕೆ ಹೊಂದಿರುವ ಪಂಚಾಯಿತಿಯಾಗಿದ್ದು, ಕಿನ್ನಿಗೋಳಿ ಮತ್ತು ಮೆನ್ನಬೆಟ್ಟು ಪಂಚಾಯಿತಿ ವ್ಯಾಪ್ತಿಯಲ್ಲೂ ಸ್ವಲ್ಪ ಮಟ್ಟಿನ ಕೃಷಿ ಚಟುವಟಿಕೆ ಇದೆ. ಪಟ್ಟಣ ಪಂಚಾಯಿತಿಯಾದಲ್ಲಿ ಕೃಷಿ ಪೂರಕ ಅನುದಾನಗಳಿಗೆ ತೊಂದರೆ ಆಗಲಿದೆ. ಅಂದರೆ ಕೃಷಿಗೆ ಸಿಗುವ ಸವಲತ್ತುಗಳು ಮುಖ್ಯವಾಗಿ ಉದ್ಯೋಗ ಖಾತ್ರಿ ಯೋಜನೆ ಕೈತಪ್ಪಲಿದೆ.

ಬಜ್ಪೆ ಮತ್ತು ಮಳವೂರು ಪಂಚಾಯಿತಿಗಳು ಪಟ್ಟಣ ಪಂಚಾಯಿತಿಯಾಗಿ ಘೋಷಣೆಯಾಗಿದ್ದು, ಜೊತೆಯಲ್ಲಿಯೇ ಕಿನ್ನಿಗೋಳಿ ಪಂಚಾಯಿತಿ ಕೂಡ ಪಟ್ಟಣ ಪಂಚಾಯಿತಿಯಾಗಿ ಘೋಷಣೆ ಆಗಬೇಕಿತ್ತು. ಆದರೆ ಕೆಲ ಕಾರಣಗಳಿಂದ ಘೋಷಣೆ ಆಗಿಲ್ಲ. ಶೀಘ್ರದಲ್ಲೇ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಆಗಿ ಘೋಷಣೆ ಆಗಲಿದೆ.

ಉಮಾನಾಥ ಕೋಟ್ಯಾನ್ ಶಾಸಕರು ಮೂಲ್ಕಿ ಮೂಡುಬಿದಿರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net