ನಿಡ್ಡೋಡಿ ಮಂಜನಕಟ್ಟೆ ರಸ್ತೆ ಅಗೆತ : ಕಿನ್ನಿಗೋಳಿ-ಗಂಜಿಮಠ-ಮೂಡುಬಿದಿರೆ ಮಾರ್ಗ ಬಂದ್

New Project (48)
Published on

ಗುರುಪುರ: ಖಾಸಗಿ ಜಾಗದಲ್ಲಿ ಸಾರ್ವಜನಿಕ ರಸ್ತೆ ನಿರ್ಮಿಸಿರುವ ಲೋಕೋಪಯೋಗಿ ಇಲಾಖೆ(ಪಿಡಬ್ಲುೃಡಿ) ವಿರುದ್ಧ ಕೋರ್ಟ್ ತೀರ್ಪು ನೀಡಿದ್ದರೂ, ಅಧಿಕಾರಿಗಳು ಕೋರ್ಟ್ ತೀರ್ಪಿನ ಬಗ್ಗೆ ಈವರೆಗೂ ಸೂಕ್ತ ಕ್ರಮ ವಹಿಸಿಲ್ಲ ಎಂದು ಆರೋಪಿಸಿದ ಜಾಗದ ಮಾಲೀಕರು ಬುಧವಾರ ಜೆಸಿಬಿ ಮೂಲಕ ರಸ್ತೆ ಅಗೆದು ಒತ್ತುವರಿ ಕಾರ್ಯ ಆರಂಭಿಸಿದ್ದಾರೆ. ಇದರಿಂದ ರಾಜ್ಯ ರಸ್ತೆ ಬಂದ್ ಆಗಿದೆ. ಪರಿಣಾಮ ಈ ರಸ್ತೆ ಅವಲಂಬಿತ ಗಂಜಿಮಠ, ಕೊಂಪದವು, ಮುಚ್ಚೂರು, ಕಿನ್ನಿಗೋಳಿ, ಮೂಡುಬಿದಿರೆ ಹಾಗೂ ಕೈಕಂಬ-ಮಂಗಳೂರು ಬಸ್‌ಗಳು ಹಾಗೂ ಇತರ ವಾಹನ ಸಂಚಾರ ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು ತೊಂದರೆಗೀಡಾಗಿದ್ದಾರೆ.

ನಿಡ್ಡೋಡಿ ಮಂಜನಕಟ್ಟೆಯ ಸಿಸಿಲಿಯಾ ಅವರು ವಿದೇಶದಲ್ಲಿದ್ದ ಸಂದರ್ಭದಲ್ಲಿ ಯಾವುದೇ ಮಾಹಿತಿ ನೀಡದೆ ಖಾಸಗಿ ಜಾಗದಲ್ಲಿ 2008ರಲ್ಲಿ ಪಿಡಬ್ಲುೃಡಿ ಸಾರ್ವಜನಿಕ ರಸ್ತೆ ನಿರ್ಮಿಸಿತ್ತು. ಸರ್ಕಾರಿ ಇಲಾಖೆ ಅಕ್ರಮದ ವಿರುದ್ಧ ಸಿಸಿಲಿಯಾ ಮತ್ತು ಅವರ ಸಂಬಂಧಿ ಹೆನ್ರಿ ಆಲ್ಮೇಡ ಅವರು ಕೋರ್ಟ್ ಮೊರೆ ಹೋಗಿದ್ದರು. ಸಿಸಿಲಿಯಾ ಅವರ ನಿವೇಶನಕ್ಕೆ ಸಮನಾದ(ರಸ್ತೆ ನಿರ್ಮಿಸಲಾದ 12 ಸೆಂಟ್ಸ್ ಜಾಗ) ಅಥವಾ ಈಗಿರುವ ರಸ್ತೆ ತೆರವುಗೊಳಿಸಿ ನಿವೇಶನ ಬಿಟ್ಟುಕೊಡಬೇಕು ಎಂದು 2017ರಲ್ಲಿ ಕೋರ್ಟ್ ತೀರ್ಪು ನೀಡಿತ್ತು.

ಆದರೆ ಪಿಡಬ್ಲುೃಡಿ, ತಹಸೀಲ್ದಾರರು ಅಥವಾ ಇತರರು ಈ ತೀರ್ಪಿಗೆ ಸಕಾರಾತ್ಮಕವಾಗಿ ಸ್ಪಂದಿಸದೆ, ತೀರ್ಪು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವ ಆಲ್ಮೇಡ , ಇದೀಗ ಕೋರ್ಟ್ ಸಿಬ್ಬಂದಿ ಸಮ್ಮುಖದಲ್ಲಿ ತಮ್ಮ ಜಾಗಕ್ಕೆ ಗಡಿ ಗುರುತಿಸಿ ರಸ್ತೆ ಅಗೆಯುವ ಕಾರ್ಯ ಆರಂಭಿಸಿದ್ದಾರೆ. ಈ ವೇಳೆ ಬಜ್ಪೆ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net