ಚಿನ್ನ ಕಳ್ಳತನದ ಕಿಂಗ್​ಪಿನ್ ಅರೆಸ್ಟ್; ಖಾಕಿ ಮಧ್ಯಸ್ಥಿಕೆಯಲ್ಲೇ ಡೀಲಿಂಗ್ ನಡೆಸುತ್ತಿದ್ದ ಆರೋಪಿ

Police
ಪೊಲೀಸರ ವಶದಲ್ಲಿ ಆರೋಪಿ ಕಿರಣ ಪಾಟೀಲ.
Published on

| ರವಿ ಗೋಸಾವಿ ಬೆಳಗಾವಿ

ನಕಲಿ ಪೊಲೀಸ್ ಐಡಿ ಇಟ್ಟುಕೊಂಡು ಚಿನ್ನ ಸ್ಮಗ್ಲಿಂಗ್, ಹವಾಲಾ ಹಣದ ಮಾಹಿತಿ ನೀಡಿ, ಪೊಲೀಸ್ ಅಧಿ ಕಾರಿಗಳ ಮಧ್ಯಸ್ಥಿಕೆಯಲ್ಲೇ ಲಕ್ಷಾಂತರ ರೂ.ಡೀಲಿಂಗ್ ನಡೆಸುತ್ತಿದ್ದ ಆರೋಪಿ ಕಿರಣ ವೀರನಗೌಡ ಪಾಟೀಲ ಭಾನುವಾರ ಸಿಐಡಿ ಬಲೆಗೆ ಬಿದ್ದಿದ್ದಾನೆ. ಆರೋಪಿ ವಿರುದ್ಧ 2 ದೂರು ದಾಖಲಿಸಲಾಗಿದೆ. ಯಮಕನಮರಡಿ ಪೊಲೀಸ್ ಠಾಣೆ ಆವರಣದಲ್ಲಿ ನಿಲ್ಲಿಸಲಾಗಿದ್ದ ಜಪ್ತಿ ಮಾಡಿದ್ದ ಕಾರಿನಲ್ಲಿ 4.9 ಕೆಜಿ ಸ್ಮಗ್ಲಿಂಗ್ ಚಿನ್ನವಿತ್ತು. ಆದರೆ, ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಡಿವೈಎಸ್ಪಿ ಸಹಕಾರದಿಂದ ಆ ಚಿನ್ನ ಕಳ್ಳತನ ಮಾಡಲಾಗಿತ್ತು. ಅದನ್ನು ಯಮಕನಮರಡಿ ಠಾಣೆ ಪೊಲೀಸರ ತಲೆಗೆ ಕಟ್ಟುವ ಪ್ರಯತ್ನ ನಡೆಸಿರುವುದು ತನಿಖೆಯಿಂದ ಬಹಿರಂಗವಾಗಿತ್ತು. ಎಡಿಜಿಪಿ ಉಮೇಶಕುಮಾರ ನೇತೃತ್ವದ ಸಿಐಡಿ ತಂಡ ಜೂ. 1ರಂದು ಯಮಕನಮರಡಿ ಠಾಣೆ ಪಿಎಎಸ್​ಐ ಸೇರಿದಂತೆ 6 ಸಿಬ್ಬಂದಿಯನ್ನು ಬೆಂಗಳೂರಿನ ಕೇಂದ್ರ ಕಚೇರಿಗೆ ಕರೆಸಿಕೊಂಡು ಹೇಳಿಕೆ ದಾಖಲಿಸಿಕೊಂಡಿತ್ತು. ಚಿನ್ನದ ಮಾಲೀಕ ತಿಲಕ ಪೂಜಾರಿ, ಚಿನ್ನ ಖರೀದಿಸಿದ್ದ ಹುಬ್ಬಳ್ಳಿ ವ್ಯಾಪಾರಿ ಜೆಡಿ (ಜನಾರ್ದನ) ಎಂಬಾತನಿಂದಲೂ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.

ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದೆಲ್ಲಿ?: ಜ.9ರಂದು ಜಪ್ತಿ ಮಾಡಲಾಗಿದ್ದ ಕಾರಿನಲ್ಲಿಯೇ ಚಿನ್ನ ಇದೆ ಎಂಬುದನ್ನು ಅರಿತ ಕಿರಣ ಹಾಗೂ ಉನ್ನತ ಪೊಲೀಸ್ ಅಧಿಕಾರಿ ಅದನ್ನು ಎಗರಿಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಅದರಂತೆ ಏ.16ಕ್ಕೆ ನ್ಯಾಯಾಲಯ ವಾಹನ ಬಿಡುಗಡೆಗೆ ಆದೇಶ ನೀಡಬಹುದು ಎಂಬ ಮಾಹಿತಿ ಇದ್ದರೂ, ಏ. 9ರಂದು ಡಿವೈಎಸ್ಪಿ ಬೆಂಗಾವಲಿನಲ್ಲಿ ವಾಹನ ಮಾಲೀಕರ ತಂಡದ ಜತೆ ವಾಹನ (ವಾಹನದಲ್ಲಿದ್ದ ಚಿನ್ನ) ಕಳ್ಳತನಕ್ಕೆ ವಿಫಲ ಯತ್ನ ನಡೆದಿತ್ತು.

ಇದಲ್ಲದೆ, ಕಿರಣ ತನ್ನ ಪತ್ನಿಯ ತವರೂರು ಯಮಕನಮರಡಿಯ ಹಲವರಿಂದ ಏ.16ಕ್ಕೂ ಮುನ್ನವೇ ಇತ್ತ ಠಾಣೆಯಲ್ಲಿದ್ದ ಕಾರಿನ ಗಾಜು ಒಡೆಸಿದ್ದ. ಬಳಿಕ ಬಿಸಿಲಿಗೆ ಒಡೆದಿರಬಹುದು ಎಂದು ಹೇಳಿ ಠಾಣೆಯ ಪಿಎಸ್​ಐ ಮೂಲಕ ಹೊಸ ಗಾಜು ಅಳವಡಿಸುವಂತೆ ಆ ಉನ್ನತ ಅಧಿಕಾರಿ ಹಾಗೂ ಡಿವೈಎಸ್ಪಿ ನೋಡಿಕೊಂಡಿದ್ದರು ಎನ್ನಲಾಗಿದೆ. ಯಮಕನಮರಡಿ ಪೊಲೀಸರು ಮಾಲೀಕರೇ ಚಿನ್ನ ಕದ್ದೊಯ್ದಿದ್ದಾರೆ ಎನಿಸುವಂತೆ ಪೂರಕ ಸಾಕ್ಯಾ್ಷಧಾರ ಸೃಷ್ಟಿಸಿದ್ದರು ಎನ್ನಲಾಗಿದೆ. ಈ ತೆರೆ ಮರೆಯ ಆಟದಿಂದಾಗಿ ಚಿನ್ನದ ಮಾಲೀಕರಿಗೆ ಠಾಣೆ ಸಿಬ್ಬಂದಿಯೇ ಕಳ್ಳರಿರಬಹುದೆಂಬ ಅನುಮಾನ ಬಂದಿತ್ತು.

ತನಿಖೆಗೆ ಐಜಿಪಿ ಆದೇಶ: ಏ. 16ರಂದು ಕಾರು ಬಿಡುಗಡೆಯಾದಾಗ ಅಲ್ಲಿ ಚಿನ್ನ ಇಲ್ಲದಿರುವುದು ಮತ್ತು ಹೊಸ ಗಾಜು ಅಳವಡಿಸಿರುವುದನ್ನು ಕಂಡು ಯಮಕನಮರಡಿ ಠಾಣೆ ಸಿಬ್ಬಂದಿಯೇ ಚಿನ್ನ ಕದ್ದಿದ್ದಾರೆ ಎಂದು ಐಜಿಪಿ ಕಚೇರಿಯಲ್ಲಿ ದೂರು ದಾಖಲಿಸುವ ಯತ್ನ ನಡೆದಿತ್ತು. ತಾವೇ ಪಿಟಿಷನ್ ಬರೆದುಕೊಟ್ಟು ಮಾಲೀಕರಿಂದ ಸಹಿ ಮಾಡಿಸಿ ಕೊಡುವಲ್ಲೂ ಯಶಸ್ವಿಯಾಗಿದ್ದರು. ನಂತರ ಸ್ವತಃ ಐಜಿಪಿಯವರೇ ತನಿಖೆಯ ಹೊಣೆಯನ್ನು ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಅವರಿಗೆ ವಹಿಸಿದ್ದರು.

ತನಿಖೆ ಸಿಐಡಿಗೆ: ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರಿಗೆ ತನಿಖೆ ವೇಳೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳೇ ಶಾಮೀಲಾಗಿರುವ ಬಗ್ಗೆ ಸಾಕ್ಷ್ಯಾಧಾರ ಲಭಿಸಿದ್ದವು. ಹೀಗಾಗಿ ಅವರು ಮಾಹಿತಿಯನ್ನು ಪೊಲೀಸ್ ಮಹಾನಿರ್ದೇಶಕರ ಗಮನಕ್ಕೆ ತಂದಿದ್ದರು. ಪ್ರಕರಣದ ಆಳ ಅರಿತ ಗೃಹ ಸಚಿವ ಬಸವರಾಜ ಬೊಮ್ಮಾಯಿ, ತನಿಖೆಯನ್ನು ಸಿಐಡಿಗೆ ವಹಿಸಿದ್ದರು.

ಸಿಐಡಿ ವಶಕ್ಕೆ: ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರಿಂದ ಪ್ರಮುಖ ಸಾಕ್ಷಿ ಸಂಗ್ರಹಿಸಿದ ಸಿಐಡಿ ಅಧಿಕಾರಿಗಳು ಆರೋಪಿ ಕಿರಣನನ್ನು ಭಾನುವಾರ ಮಧ್ಯಾಹ್ನ ಬಂಧಿಸಿದ್ದು, ಬೆಳಗಾವಿಯ ವಿಚಾರಣಾ ನ್ಯಾಯಾಲಯ 14 ದಿನಗಳ ಕಾಲ ಸಿಐಡಿ ವಶಕ್ಕೆ ಒಪ್ಪಿಸಿದೆ.

ವಿಜಯವಾಣಿ ವರದಿಗೆ ಅಧಿಕಾರಿ ಮೆಚ್ಚುಗೆ

ಸ್ಮಗ್ಲಿಂಗ್ ಚಿನ್ನದ ಕಳ್ಳತನ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೇ ಶಾಮೀಲಾಗಿರುವ ಇಡೀ ಪ್ರಕರಣದ ಕುರಿತಾಗಿ ವಿಜಯವಾಣಿ ಇಂಚಿಂಚೂ ಮಾಹಿತಿ ಸಂಗ್ರಹಿಸಿ ಸರಣಿಯಾಗಿ ವರದಿ ಮಾಡಿತ್ತು. ಪ್ರಕರಣದ ಕಿಂಗ್​ಪಿನ್ ಜತೆಗೆ ಉನ್ನತ ಮಟ್ಟದ ಅಧಿಕಾರಿಗಳೇ ಕೈ ಜೋಡಿಸಿದ್ದರಿಂದ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದ ಅಮಾಯಕ ಸಿಬ್ಬಂದಿ ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಈ ಪ್ರಕರಣದ ಕುರಿತಾಗಿ, ‘ಭಾನುವಾರ ಮತ್ತು ಸೋಮವಾರ ನಡೆದ ಬೆಳವಣಿಗೆ ನಮ್ಮಲ್ಲಿ ಆತ್ಮಬಲ ಹೆಚ್ಚಿಸಿದೆ. ಅಲ್ಲದೆ, ಈ ಪ್ರಕರಣವನ್ನು ಬಯಲಿಗೆಳೆಯಲು ‘ವಿಜಯವಾಣಿ’ಯೂ ಶ್ರಮಿಸಿದೆ. ತಮಗೆ ಅಭಿನಂದನೆ’ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net