

ಮಂಗಳೂರು: ಎರಡು ಬಲಿಷ್ಠ ಹಾವುಗಳಾದ ಕಾಳಿಂಗ ಸರ್ಪ ಮತ್ತು ಹೆಬ್ಬಾವು ಎದುರು-ಬದುರಾದಾಗ ಅಲ್ಲಿ ಕಾದಾಟ ನಡೆಯುವುದು ಸಹಜವೇ. ಆದರೆ, ಕಿತ್ತಾಟದಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಊಹಿಸುವುದು ತುಸು ಕಷ್ಟವೇ ಸರಿ. ಆದರೆ, ಬೆಳ್ತಂಗಡಿ ತಾಲೂಕಿನ ಸೋಮಂತಡ್ಕದಲ್ಲಿ ನಡೆದಿರುವ ಘಟನೆ ಎಂಥವರನ್ನು ಹುಬ್ಬೇರಿಸುತ್ತದೆ.
ಯಾವುದೇ ದೊಡ್ಡ ಪ್ರಾಣಿಗಳನ್ನು ಸಹ ತನ್ನ ಬಲಿಷ್ಠ ದೇಹದಿಂದ ಸುತ್ತುವರಿದು, ಉಸಿರುಗಟ್ಟಿ ಸಾಯಿಸಿ ಲೀಲಾಜಾಲವಾಗಿ ನುಂಗಿ ನೀರು ಕುಡಿಯುವ ಹೆಬ್ಬಾವನ್ನೇ, ಕಾಳಿಂಗ ಸರ್ಪ ನುಂಗಿತೆಂದರೆ ಯಾರಿಗೆ ತಾನೇ ಅಚ್ಚರಿಯಾಗುವುದಿಲ್ಲ. ಈ ರೀತಿಯ ಅಚ್ಚರಿಗೆ ಸೋಮಂತಡ್ಕ ಸಾಕ್ಷಿಯಾಗಿದೆ.
ಹೆಬ್ಬಾವನ್ನು ನುಂಗಿದ ಕಾಳಿಂಗ ಸರ್ಪ ಮತ್ತೆ ವಾಪಸ್ಸು ಹೊರ ಹಾಕಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೋಮಂತಡ್ಕದ ಮನೆಯೊಂದರ ಹಿತ್ತಲಿನಲ್ಲಿ ಈ ಘಟನೆ ನಡೆದಿದೆ. ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪ, ಹೆಬ್ಬಾವನ್ನು ನುಂಗಿ ಎರಡು ದಿನದಿಂದ ಒಂದು ಸ್ವಲ್ಪವೂ ಕದಲದ ಇದ್ದಲ್ಲಿಯೇ ಇತ್ತು.
ಮನೆಯವರಿಂದ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗತಜ್ಞ ಬೆಳ್ತಂಗಡಿಯ ಸ್ನೇಕ್ ಅಶೋಕ್ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ, ಕಾಡಿಗೆ ರವಾನಿಸಿದರು. ಆದರೆ, ಘಟನೆಯಲ್ಲಿ ಹೆಬ್ಬಾವು ಮೃತಪಟ್ಟಿತು. (ದಿಗ್ವಿಜಯ ನ್ಯೂಸ್)