

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಬೇಸಿಗೆಯಲ್ಲಿ ರೈತರಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಅನುಕೂಲವಾಗುತ್ತಿದ್ದ ಕಿಂಡಿ ಅಣೆಕಟ್ಟುಗಳ ನಿರ್ವಹಣೆ ದೊಡ್ಡ ಸವಾಲಾಗಿದೆ. ಸರ್ಕಾರ ನೀರಾವರಿ ಇಲಾಖೆಗಳಿಗೆ ಅನುದಾನ ಮಂಜೂರು ಮಾಡದ ಹಿನ್ನೆಲೆಯಲ್ಲಿ ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕುವ ಕಾರ್ಯ ಇನ್ನೂ ಆರಂಭಗೊಂಡಿಲ್ಲ.
ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಅಕ್ಟೋಬರ್ ತಿಂಗಳ ಅಂತ್ಯಕ್ಕೆ ನದಿಗೆ ಅಡ್ಡಲಾಗಿ ಕಟ್ಟಲಾದ ಅಣೆಕಟ್ಟಿಗೆ ಹಲಗೆ ಹಾಕಿ ನೀರು ಸಂಗ್ರಹಿಸುವ ಕಾರ್ಯಕ್ಕೆ ನೀರಾವರಿ ಇಲಾಖೆ ಹಾಗೂ ಸ್ಥಳೀಯ ಕೃಷಿಕರು ಕಾರ್ಯಪ್ರವೃತ್ತರಾಗುತ್ತಿದ್ದರು. ಆದರೆ ಈ ಭಾರಿ ಸರ್ಕಾರದ ಅನುದಾನವಿಲ್ಲದೆ ಹಲಗೆ ಹಾಕಲು ಕೃಷಿಕರು ಮುಂದಾಗಿಲ್ಲ. ಬಹುತೇಕ ಕಡೆಗಳಲ್ಲಿ ಅಣೆಕಟ್ಟಿನ ನಿರ್ವಹಣೆಗೆ ಕೃಷಿಕರು ನೀರಾವರಿ ಇಲಾಖೆಯ ಬಾಗಿಲು ಬಡಿಯುವಂತಾಗಿದೆ.
ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಕಿಂಡಿ ಅಣೆಕಟ್ಟುಗಳಿದ್ದು, ಸಣ್ಣ ನೀರಾವರಿ ಇಲಾಖೆ ಮುಖಾಂತರ ನಿರ್ವಹಿಸಲಾಗುತ್ತಿದೆ. ಕಿಂಡಿ ಅಣೆಕಟ್ಟುಗಳಲ್ಲಿ ಸಂಗ್ರಹವಾಗುವ ನೀರಿನ ಮುಖಾಂತರ ಆ ಪ್ರದೇಶದ ರೈತರು ಋತುಕಾಲಿಕ ಹಾಗೂ ದೀರ್ಘಕಾಲಿನ ಕೃಷಿಗೆ ನೀರು ಒದಗಿಸುವ ಜತೆಗೆ, ನೀರಿನ ಮೂಲಗಳಿಗೆ ಪ್ರಮುಖ ಆಸರೆಯಾಗಿತ್ತು. ಆದರೆ ನೀರಿನ ಮಟ್ಟ ಕಡಿಮೆಯಾಗುತ್ತಿದ್ದರೂ ಜಿಲ್ಲಾದ್ಯಂತ ಎಲ್ಲೂ ಅಣೆಕಟ್ಟಿಗೆ ಹಲಗೆ ಹಾಕುವಲ್ಲಿ ಇಲಾಖೆಯಾಗಲಿ ಅಥವಾ ಸ್ಥಳೀಯ ಕೃಷಿಕರಾಗಲಿ ಮುಂದಾಗಿಲ್ಲ. ಮುಂದಿನ ಬೇಸಿಗೆ ಸಮಯದಲ್ಲಿ ಭಾರಿ ನೀರಿನ ಅಭಾವ ಕಾಡುವ ಸಾಧ್ಯತೆ ಹೆಚ್ಚಿದೆ ಎನ್ನುವುದು ಕೃಷಿಕರ ಮಾತು.
ಕಾರ್ಕಳ ಹಾಗೂ ಹೆಬ್ರಿ ತಾಲೂಕಿನಲ್ಲಿ ಹರಿಯುವ ಸ್ವರ್ಣ, ಶಾಂಭವಿ, ಪಾಪನಾಶಿನಿ ಹಾಗೂ ಸೀತಾ ನದಿಗಳು ಸೇರಿದಂತೆ ನೂರಾರು ಉಪನದಿಗಳಿಗೆ ಅಡ್ಡಲಾಗಿ ನೂರಾರು ಕಿಂಡಿ ಅಣೆಕಟ್ಟು ನಿರ್ಮಿಸಿ ಕೃಷಿಕರಿಗೆ ಸಹಕಾರಿಯಾಗಿದ್ದರೂ ಇದೀಗ ಬಹುತೇಕ ನದಿಗಳಲ್ಲಿ ನೀರಿನ ಮಟ್ಟ ಬತ್ತುವ ಸ್ಥಿತಿಯಲ್ಲಿದ್ದರೂ ಹಲಗೆಹಾಕುವಲ್ಲಿ ಹಾಗೂ ಅಣೆಕಟ್ಟಿನ ನಿರ್ವಹಣೆಯಲ್ಲಿ ಇಲಾಖೆ ಗಮನಹರಿಸಿಲ್ಲ ಎನ್ನುವುದು ಕೃಷಿಕರ ಆರೋಪ.
ಕಿಂಡಿ ಅಣೆಕಟ್ಟುಗಳ ಹಲಗೆ ಅಳವಡಿಕೆಗೆ ರಾಜ್ಯ ಸರ್ಕಾರದಿಂದ ಈವರೆಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಕೃಷಿಕರು ಕಿಂಡಿ ಅಣೆಕಟ್ಟಿನ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಪ್ರಸ್ತುತ ಮಳೆಗಾಲ ಮುಗಿದಿದ್ದು, ನೀರಿನ ಹರಿವು ಕಡಿಮೆಯಾಗುತ್ತಿದೆ. ಬೇಸಿಗೆ ಸಂದರ್ಭ ಕೃಷಿ ಹಾಗೂ ಇನ್ನಿತರ ಚಟುವಟಿಕೆಗಳಿಗೆ ನೀರಿನ ಕೊರತೆ ಉಂಟಾಗುವ ಸಂಭವವಿದೆ. ಅನುದಾನದ ಕೊರತೆಯಿಂದ ಕಿಂಡಿ ಅಣೆಕಟ್ಟುಗಳಿಗೆ ಸೂಕ್ತ ಸಮಯದಲ್ಲಿ ಹಲಗೆ ಅಳವಡಿಸದಿದ್ದಲ್ಲಿ, ಸ್ಥಳೀಯ ರೈತರೇ ಮುಂದಿನ ದಿನಗಳಲ್ಲಿ ಕಿಂಡಿ ಅಣೆಕಟ್ಟು ನಿರ್ವಹಣೆಗೆ ಪರ್ಯಾಯ ಮಾರ್ಗೋಪಾಯ ಕಂಡುಕೊಳ್ಳಬೇಕಾದ ಅನಿವಾರ್ಯತೆ ಬರಬಹುದು ಆದುದರಿಂದ ಕಾರ್ಕಳ ವಿಧಾನಸಭಾ ಕ್ಷೇತ್ರ ಸೇರಿದಂತೆ ಉಡುಪಿ ಜಿಲ್ಲೆಯ ಎಲ್ಲ ಕಿಂಡಿ ಅಣೆಕಟ್ಟುಗಳಿಗೆ ಶೀಘ್ರ ಹಲಗೆಗ ಅಳವಡಿಕೆಗೆ ಸೂಕ್ತ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಅವರು ಸಣ್ಣ ನೀರಾವರಿ ಸಚಿವರಿಗೆ ಪತ್ರ ಬರೆದು ಅನುದಾನ ಬಿಡುಗಡೆಗೆ ಆಗ್ರಹಿಸಿದ್ದಾರೆ.
ಕಾರ್ಕಳ ವಿಧಾನಸಭಾ ಕ್ಷೇತ್ರದ ಸುಮಾರು 250 ಕಿಂಡಿ ಅಣೆಕಟ್ಟುಗಳು ಸೇರಿದಂತೆ ಉಡುಪಿ ಜಿಲ್ಲೆಯ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸಲು ಅನುದಾನ ನೀಡಲು ರಾಜ್ಯ ಕಾಂಗ್ರೆಸ್ ಸರ್ಕಾರದ ಬಳಿ ಹಣವಿಲ್ಲ. ಕೃಷಿಕರಿಗೆ ದ್ರೋಹ ಬಗೆಯುವ ಮೂಲಕ ಸರ್ಕಾರ ರೈತರ ಬೆನ್ನಿಗೆ ಇರಿದಿದೆ. -ವಿ.ಸುನೀಲ್ ಕುಮಾರ್ ಶಾಸಕ ಪ್ರತಿ ವರ್ಷವೂ ಅಣೆಕಟ್ಟಿನ ನಿರ್ವಹಣೆಗೆ ಇಲಾಖೆಯ ಬಾಗಿಲು ಅಲೆಯುವಂತಾಗಿದೆ. ಕೃಷಿಕರೇ ಕೈಯಿಂದ ಹಾಕಿ ಅಣೆಕಟ್ಟಿಗೆ ಹಲಗೆ ಹಾಕುವ ಕಾಯಕ ಮಾಡಿದರೂ ಇಲಾಖೆಯಿಂದ ಬರುವುದು ಅಲ್ಪಮೊತ್ತ ಮಾತ್ರ. ಅದು ಕೂಡ ದೊರಕುವುದು ಏಪ್ರಿಲ್, ಮೇ ತಿಂಗಳಲ್ಲಿ ಹಲಗೆ ತೆಗೆಯುವ ಸಂದರ್ಭ. ಹೆಚ್ಚಿನ ಅನುದಾನ ಮಂಜೂರು ಮಾಡಿದರೆ ಸರಿಯಾದ ವೇಳೆಗೆ ಅಣೆಕಟ್ಟಿನ ನಿರ್ವಹಣೆಗೆ ಸಾಧ್ಯ. -ಸುಧಾಕರ್ ಕೃಷಿಕರು