ರಾಜ್ಯದಲ್ಲಿ ಡೆಂಘೆ ಪ್ರಕರಣ ಹೆಚ್ಚಳ, ಸರ್ಕಾರ ಕಿಮ್ಸ್ ಗೆ ಹೆಚ್ಚುವರಿ ಪ್ಯಾಕೇಜ್ ನೀಡಲಿ, ವ್ಯವಸ್ಥೆ ಪರಿಶೀಲಿಸಿದ ಶಾಸಕರ ಆಗ್ರಹ

IMG_20240707_182735_43-1.jpg
Published on

ಹುಬ್ಬಳ್ಳಿ: ರಾಜ್ಯದಲ್ಲಿ ಡೆಂಘೆ ಹಾವಳಿ ದಿನೇದಿನೆ ಹೆಚ್ಚಾಗುತ್ತಿದ್ದು ಉತ್ತರ ಕರ್ನಾಟಕದ ಆರೋಗ್ಯ ದೇವತೆ ಎಂದೇ ಪರಿಗಣಿಸಲಾಗುವ ಕರ್ನಾಟಕ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಕಿಮ್ಸ್) ಮೇಲೆ ರೋಗಿಗಳ ಒತ್ತಡ ಅಧಿಕವಾಗುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಹೆಚ್ಚುವರಿ ಪ್ಯಾಕೇಜ್ ನೀಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆಗ್ರಹಿಸಿದರು.

ನಗರದ ಕಿಮ್ಸ್ ಆಸ್ಪತ್ರೆಗೆ ಭಾನುವಾರ ಶಾಸಕ ಮಹೇಶ ಟೆಂಗಿನಕಾಯಿ ಜತೆಗೂಡಿ ಭೇಟಿ ನೀಡಿದ ಅವರು ಡೆಂಘೆ ಚಿಕಿತ್ಸೆ ಬಗ್ಗೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಹುಬ್ಬಳ್ಳಿ- ಧಾರವಾಡ ಮಾತ್ರವಲ್ಲ, ಅಕ್ಕಪಕ್ಕದ ಹಾವೇರಿ, ಗದಗ, ಉತ್ತರ ಕನ್ನಡ, ಬಳ್ಳಾರಿ, ಕೊಪ್ಪಳ ಮುಂತಾದ ಜಿಲ್ಲೆಗಳಿಂದಲೂ ರೋಗಿಗಳು ಇಲ್ಲಿಗೆ ಬರುತ್ತಾರೆ. ಈಗಿರುವ ಡೆಂಘೆ ಪ್ರಕರಣಗಳಲ್ಲಿಯೂ ಹೊರ ಜಿಲ್ಲೆಯವರೇ ಹೆಚ್ಚಿದ್ದಾರೆ. ಹಾಗಾಗಿ ಸರ್ಕಾರ ಇತ್ತ ಕಡೆ ಗಮನ ಹರಿಸಬೇಕು ಎಂದರು.

ಆರೋಗ್ಯ ಸಚಿವರು ರಾಜ್ಯದಲ್ಲಿ ಪ್ರವಾಸ ಮಾಡಬೇಕು. ಬೆಂಗಳೂರು ಬಿಟ್ಟು ಹೊರಗೆ ಬರಬೇಕು. ಎಲ್ಲಿ ಡೆಂಘೆ ಹೆಚ್ಚಿದೆ ನೋಡಬೇಕು. ಉತ್ತಮ ಚಿಕಿತ್ಸೆ ನೀಡುತ್ತಿರುವ ಕಿಮ್ಸ್ ನಲ್ಲಿ ಇನ್ನಷ್ಟು ಸವಲತ್ತುಗಳನ್ನು ನೀಡಬೇಕು. ಸಿಬ್ಬಂದಿ ಹಾಗೂ ಹಣಕಾಸಿನ ಕೊರತೆ ನೀಗಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.

ಸದ್ಯ ಕಿಮ್ಸ್ನಲ್ಲಿ 33 ಮಕ್ಕಳು, 45 ವಯಸ್ಕರು ಡೆಂಘೆ ಲಕ್ಷಣದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೆಲ್ಲರೂ ಅಪಾಯದಿಂದ ಹೊರಗೆ ಬಂದಿದ್ದಾರೆ ಎಂದು ಮಾಹಿತಿ ನೀಡಿದರು.
ಶಾಸಕ ಮಹೇಶ ಟೆಂಗಿನಕಾಯಿ, ಕಿಮ್ಸ್ ವೈದ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net