ನಿರ್ವಹಣೆರಹಿತ ರಸ್ತೆಯಲ್ಲಿ ಗೂಡಂಗಡಿಗಳ ದರ್ಬಾರ್, ಕಿಮ್ಸ್ ಬಳಿಯ ರಸ್ತೆಯಲ್ಲಿ ಮಿನಿ ಮಾರ್ಕೆಟ್

IMG_20240217_133833_888.jpg
Published on

ಹುಬ್ಬಳ್ಳಿ: ಇಲ್ಲಿಯ ನೀಲಿಜಿನ್ ರಸ್ತೆಯಿಂದ ನ್ಯೂ ಕಾಟನ್ ಮಾರ್ಕೆಟ್ ಮೂಲಕ ಕಿಮ್ಸ್ ಬಳಿಯಿಂದ ಅಮೃತ ಥೇಟರ್ ಮುಖೇನ ಹುಬ್ಬಳ್ಳಿ ಧಾರವಾಡ ರಸ್ತೆ ತಲುಪುವ ಮಾರ್ಗ ನಿರ್ಹಹಣೆ ಕೊರತೆಯಿಂದ ಬಳಲುತ್ತಿದೆ.

ನ್ಯೂ ಕಾಟನ್ ಮಾರ್ಕೆಟ್ ನಿಂದ ಕಿಮ್ಸ್ ಗೆ ಹೋಗುವ ಮಾರ್ಗದಲ್ಲಿ (ಮಹಿಳಾ ವಿದ್ಯಾಪೀಠ ಹಿಂಭಾಗ) ರಸ್ತೆ ಸುಧಾರಣೆಯಾಗಿಲ್ಲ. ಮುಳ್ಳು ಕಂಟಿಗಳು ಬೆಳೆದುಕೊಂಡಿವೆ. ಇಕ್ಕಟ್ಟು ರಸ್ತೆಯಲ್ಲಿ ವಾಹನಗಳು ಸಂಚರಿಸಬೇಕು.

ಇದೇ ರಸ್ತೆಯ ಒಂದು ಬದಿಯಲ್ಲಿ ಕೆಲವರು ಕಸ ತಂದು ಸುರಿಯುತ್ತಿದ್ದಾರೆ. ಕಟ್ಟಡಗಳ ತ್ಯಾಜ್ಯಗಳನ್ನು ತಂದು ಬಿಟ್ಟಿರುವುದರಿಂದ ದೊಡ್ಡ ದೊಡ್ಡ ಕಸದ ರಾಶಿಗಳು ಹಾಗೇ ಇವೆ. ಕನಿಷ್ಠ ಪಕ್ಷ ಸಮತಟ್ಟು ಮಾಡಿ ವಾಹನಗಳು ಓಡಾಡುವಂತೆ ಮಾಡಿದರೆ ಜನರಿಗೆ, ವಾಹನ ಸವಾರರಿಗೆ ಅನುಕೂಲವಾಗುತ್ತದೆ.

ಕಿಮ್ಸ್ ಶವಾಗಾರ ರಸ್ತೆಯ ಗೇಟ್ ಕ್ಲೋಸ್ ಮಾಡಲಾಗಿದೆ. ಆ ಗೇಟ್ ಬಳಿಯಿಂದ ಮುಂದೆ ಸಾಗಿದರೆ ಮುಳ್ಳಿನ ಗಿಡಗಳು ರಸ್ತೆಯಲ್ಲೇ ಬೆಳೆದಿವೆ. ವಾಹನ ಸವಾರರು ಇಲ್ಲಿ ಪರದಾಡುತ್ತಾರೆ. ಎರಡೂ ಬದಿಯಿಂದ ವಾಹನಗಳು ಬಂದರೆ ದಾಟಲು ಸಾಧ್ಯವಾಗದೇ ಅಪಘಾತಕ್ಕೆ ದಾರಿಯಾಗುವ ಸಾಧ್ಯತೆ ಇದೆ.

ಕಿಮ್ಸ್ ಹಿಂಬದಿಯ ಗೇಟ್ ನಲ್ಲಿ ಎಡಕ್ಕೆ ತಿರುವು ಪಡೆದ ಕೂಡಲೇ ಅಲ್ಲಿ ಗೂಡಂಗಡಿಗಳ ಸಾಲು ಶುರುವಾಗುತ್ತದೆ. ಪಕ್ಕದ ಇಳಿಜಾರಿನಿಂದಲೇ ಆರಂಭವಾಗುವ ಅಂಗಡಿಗಳು ಸಮೀಪದ ಮೆಡಿಕಲ್ ಶಾಪ್ ವರೆಗೆ ಕಂಡು ಬರುತ್ತವೆ.

ಆರಂಭದಲ್ಲಿ ರಸ್ತೆಯ ಒಂದು ಬದಿ ಮಾತ್ರ ಗೂಡಂಗಡಿಗಳು ಇದ್ದವು. ಇದೀಗ ಎರಡೂ ಬದಿಯಲ್ಲಿ ವ್ಯಾಪಾರಕ್ಕಾಗಿ ಅಂಗಡಿಗಳನ್ನು ತೆರೆದಿರುವುದರಿಂದ ರಸ್ತೆ ಮತ್ತಷ್ಟು ಇಕ್ಕಟ್ಟಾಗಿದೆ.
ರಸ್ತೆಯ ಎರಡೂ ಬದಿಯಲ್ಲಿ ಎಗ್ ರೈಸ್, ಮಾಂಸಾಹಾರ ಇತ್ಯಾದಿ ಗೂಡಂಗಡಿಗಳು ಕಂಡು ಬರುತ್ತದೆ. ಕೆಲವರು ಗೃಹೋಪಯೋಗಿ ವಸ್ತುಗಳ ಮಾರಾಟ ಮಾಡುತ್ತಾರೆ.

ಕಿಮ್ಸ್ ಗೆ ಬರುವ ರೋಗಿಗಳು ಹಾಗೂ ಅವರ ಸಂಬಂಧಿಕರು, ರೋಗಿಗಳನ್ನು ನೋಡಲು ಆಗಮಿಸುವ ಸಾರ್ವಜನಿಕರು ಇವರ ಗ್ರಾಹಕರು.

ಇವರಿಗೆಲ್ಲ ಕಡಿಮೆ ವೆಚ್ಚದಲ್ಲಿ ಬಿಸಿ ಆಹಾರ ಸಿಗುತ್ತದೆ ಎಂಬುದೇನೋ ನಿಜ. ಆದರೆ, ರಸ್ತೆಯನ್ನು ಆವರಿಸಿಕೊಳ್ಳುತ್ತಿರುವುದಕ್ಕೆ ಅನೇಕರು ಆಕ್ಷೇಪ ವ್ಯಕ್ತಪಡಿಸುತ್ತಾರೆ.

ಬಟ್ಟೆ, ಬಕೆಟ್, ಮೊಬೈಲ್ ಸಿಮ್, ಇತರೆ ವಸ್ತುಗಳ ಮಾರಾಟವೂ ಇಲ್ಲಿ ಭರ್ಜರಿಯಾಗಿ ನಡೆಯುತ್ತದೆ. ಸದ್ಯ ಇದು ಹುಬ್ಬಳ್ಳಿಯ ಮಿನಿ ಮಾರ್ಕೆಟ್ ಆಗಿ ಪರಿವರ್ತನೆಯಾಗಿದೆ.

ಕಿಮ್ಸ್ ಗೇಟ್ ಬಳಿ ನೂರಾರು ವಾಹನಗಳನ್ನು ಪಾರ್ಕ್ ಮಾಡಲಾಗುತ್ತಿತ್ತು. ಆಗ ವಾಹನಗಳನ್ನು ಎಡಕ್ಕೆ ತಿರುಗಿಸಿಕೊಳ್ಳುವುದು ಕಷ್ಟದ ಕೆಲಸವಾಗಿತ್ತು. ಕೆಲ ದಿನಗಳಿಂದ ಪಾರ್ಕಿಂಗ್ ಮಾಡುತ್ತಿಲ್ಲ ಎಂಬುದು ಸಮಾಧಾನದ ಸಂಗತಿ.

ಮೊದಲೆಲ್ಲ ಒಂದು ಎರಡು ಗೂಡಂಗಡಿಗಳು ಇದ್ದವು. ಈಗ ಸ್ಪರ್ಧೆಗೆ ಇಳಿದವರಂತೆ ಹೆಜ್ಜೆಗೊಂದು ತಲೆ ಎತ್ತಿ ನಿಲ್ಲುತ್ತಿವೆ. ಏನೇ ಆದರೂ, ರಸ್ತೆ ಸಂಚಾರಕ್ಕೆ ಅಡೆತಡೆಯಾಗದಂತೆ ವ್ಯವಸ್ಥೆ ಮಾಡುವುದು ಮಹಾನಗರ ಪಾಲಿಕೆ ಕರ್ತವ್ಯವಾಗಿದೆ ಎಂದು ಜನರು ಬೇಡಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net