

ತೀರ್ಥಹಳ್ಳಿ: ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ಆಡಳಿತ ನ್ಯಾಯಾಧೀಶ ನ್ಯಾ. ದೇವದಾಸ್ ಪಾಲ್ಗೊಂಡಿದ್ದು ನ್ಯಾಯಮೂರ್ತಿಗಳ ಸಮ್ಮುಖದಲ್ಲೇ 5 ಪ್ರಮುಖ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಲಾಯಿತು.
ಈ ಲೋಕ ಅದಾಲತ್‌ನಲ್ಲಿ ಒಟ್ಟು 849 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಇದರಲ್ಲಿ ಸಿವಿಲ್, ಹಣಕಾಸು ವ್ಯವಹಾರ ಚೆಕ್ ಬೌನ್ಸ್ ಮಾತ್ರವಲ್ಲದೆ ಮಾನನಷ್ಟ ಮುಂತಾದ ಪ್ರಕರಣಗಳೇ ಅಧಿಕವಾಗಿದ್ದವು. ಹೊಡೆದಾಟ ಮುಂತಾದ ರಾಜಿ ಮಾಡಿಕೊಳ್ಳಬಹುದಾದ ಕ್ರಿಮಿನಲ್ ಪ್ರಕರಣಗಳೂ ಅದಾಲತ್‌ನಲ್ಲಿ ಇತ್ಯರ್ಥವಾಗಿವೆ. ವೈವಾಹಿಕ ಜೀವನದಿಂದ ಬಿಡುಗಡೆ ಹೊಂದಲು ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ದಂಪತಿ ತಮ್ಮ ಅರ್ಜಿಯನ್ನು ಹಿಂದಕ್ಕೆ ಪಡೆದು ಒಂದಾಗಿ ಬಾಳುವುದಾಗಿ ಒಪ್ಪಿದರು.
ಕಳೆದ ವಿಧಾನಸಭೆ ಚುನಾವಣೆಯವರೆಗೆ ರಾಜಕೀಯವಾಗಿ ಕಡು ವಿರೋಧಿಗಳಾಗಿದ್ದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಸಹಕಾರಿ ಧುರೀಣ ಆರ್.ಎಂ.ಮಂಜುನಾಥಗೌಡ ಪರಸ್ಪರ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯ ಅರ್ಜಿಗಳನ್ನು ಈ ಲೋಕ ಅದಾಲತ್‌ನಲ್ಲಿ ಹಿಂದಕ್ಕೆ ಪಡೆದಿದ್ದಾರೆ. ರಾಜ್ಯಮಟ್ಟದವರೆಗೂ ಗಮನ ಸೆಳೆದಿದ್ದ ಇಬ್ಬರು ಮುಖಂಡರ ನಡುವಿನ ವಿವಾದ ಈ ಲೋಕ ಅದಾಲತ್‌ನಲ್ಲಿ ಅಧಿಕೃತವಾಗಿ ಮುಕ್ತಾಯ ಕಂಡಿದೆ.
ಜಿಲ್ಲಾ ಸತ್ರ ನ್ಯಾಯಾಧೀಶ ನ್ಯಾ.ಮಂಜುನಾಥ ನಾಯಕ್ ಜತೆ ಆಗಮಿಸಿದ ನ್ಯಾ. ದೇವದಾಸ್ ಅವರನ್ನು ನ್ಯಾಯಾಧೀಶರಾದ ಎಸ್.ಎಸ್.ಭರತ್, ಅಮೃತಾ, ಯಶವಂತ ಕುಮಾರ್, ವಿಶ್ವನಾಥ್ ಸವದಿ ಹೂಗುಚ್ಛ ನೀಡಿ ಬರಮಾಡಿಕೊಂಡರು. ವಕೀಲರ ಸಂಘದ ಅಧ್ಯಕ್ಷ ಎಸ್.ವಿ.ಲೋಕೇಶ್ ಮತ್ತು ಸಂಘದ ಸದಸ್ಯರು, ಸಿಬ್ಬಂದಿ ಇದ್ದರು. ಪೋಲಿಸ್ ವಂದನೆ ಸ್ವೀಕರಿಸಿದ ನ್ಯಾಯಮೂರ್ತಿಗಳು ಕೋಟ್‌ನ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಕುಪ್ಪಳಿಗೆ ಭೇಟಿ ನೀಡಿ ಶೃಂಗೇರಿಗೆ ತೆರಳಿದರು.
ಇತ್ಯರ್ಥವಾದ ಪ್ರಕರಣಗಳಲ್ಲಿ 500 ಪಿಟಿ ಕೇಸ್, ಸೆಕ್ಷನ್ 279 ಮತ್ತು 337ರ 210 ಪ್ರಕರಣಗಳು, 60 ಚೆಕ್‌ಬೌನ್ಸ್, ಸಿವಿಲ್ 40, ಹೊಡೆದಾಟದ 19 ಪ್ರಕರಣ, ಪಿಸಿಆರ್ 08, 125 ಸಿಆರ್‌ಪಿಸಿ ಪ್ರಕರಣ 06, ಜನ್ಮ ದಿನಾಂಕ ಪ್ರಕರಣ 04, ವಾಹನ ಅಪಘಾತ ಮತ್ತು ವಿಚ್ಛೇದನದ ತಲಾ ಒಂದು ಪ್ರಕರಣಗಳು ಸೇರಿವೆ.