

ಮೂಲ್ಕಿ: ಕಿಲ್ಪಾಡಿ ಗ್ರಾಮ ಪಂಚಾಯಿತಿಯ 2023-24ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಶುಕ್ರವಾರ ನಡೆಯಿತು.
ಹೆದ್ದಾರಿ ಬದಿಯ ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಮೆಸ್ಕಾಂ ಇಲಾಖೆ ಸಿಬ್ಬಂದಿ ಮರದ ಗೆಲ್ಲು ಕಡಿದು ಗೆಲ್ಲುಗಳನ್ನು ತೆರವು ಮಾಡದೆ ನೀರು ಹೋಗುವ ಚರಂಡಿ, ರಸ್ತೆ ಬದಿಯಲ್ಲಿ ಹಾಕಿ ಹೋಗುತ್ತಾರೆ, ಇದರಿಂದ ನಡೆದಾಡಲು ಹಾಗೂ ನೀರು ಹರಿದು ಹೋಗಲು ತೊಂದರೆಯಾಗುತ್ತಿದೆ ಎಂದು ದೂರಿದರು.
ಪಂಚಾಯಿತಿ ವ್ಯಾಪ್ತಿಯ ಕುಮಾರಮಂಗಿಲ ದೇವಸ್ಥಾನದ ಬಳಿ ಲೋಕೋಪಯೋಗಿ ಇಲಾಖೆಯಿಂದ ಕಾಂಕ್ರೀಟ್ ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥ ಚಂದ್ರಶೇಖರ ಮಯ್ಯ ಒತ್ತಾಯಿಸಿದರು.
ಶಿಮಂತೂರು ಕುಬೆವೂರು ರಸ್ತೆಗೆ ಚರಂಡಿ ಹಾಗೂ ರಾಜ್ಯ ಹೆದ್ದಾರಿ ಬದಿ ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಕೆರೆಕಾಡಿನಲ್ಲಿ ಜಲಜೀವನ್ ಕಾಮಗಾರಿ ಸಮಸ್ಯೆ ಇದ್ದು, ಈ ಬಗ್ಗೆ ಪರಿಶೀಲಿಸಬೇಕು ಎಂದು ಪಂಚಾಯಿತಿ ಸದಸ್ಯೆ ದಮಯಂತಿ ಆಗ್ರಹಿಸಿದರು. ಇದಕ್ಕೆ ಜಿಪಂ ಜೂನಿಯರ್ ಇಂಜಿನಿಯರ್ ಪ್ರಶಾಂತ್ ಆಳ್ವ ಮಾತನಾಡಿ, ಕಾಮಗಾರಿ ಸರಿಯಾದರೆ ಮಾತ್ರ ಬಿಲ್ ಪಾಸ್ ಮಾಡಲಾಗುತ್ತೆ ಕಳಪೆ ಕಾಮಗಾರಿಗೆ ಅವಕಾಶವಿಲ್ಲ ಎಂದರು.
ಗೃಹಲಕ್ಷ್ಮೀ ಯೋಜನೆಗೆ ಸರ್ವರ್ ಸಮಸ್ಯೆ ಇದ್ದು ಮೆಸೇಜ್ ಬಂದರೆ ಮಾತ್ರ ಬನ್ನಿ. ಇಲ್ಲದಿದ್ದರೆ ಬರಬೇಡಿ ಎಂದು ಹೇಳುತ್ತಾರೆ ಎಂದು ಮಹಿಳೆಯೊಬ್ಬರು ದೂರಿದರು.
ಪಂಚಾಯಿತಿ ವ್ಯಾಪ್ತಿಯ ತೋಡುಗಳಲ್ಲಿ ಹೂಳೆತ್ತುವ ಕಾಮಗಾರಿಗೆ ಆದ್ಯತೆ ನೀಡಿದ್ದು, ಉದ್ಯೋಗ ಖಾತ್ರಿ ಯೋಜನೆ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗೋಪಿನಾಥ ಪಡಂಗ ಹೇಳಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ತ್ಯಾಜ್ಯ ವಿಲೇವಾರಿಗೆ ವಾಹನ ಖರೀದಿಸಿ ಮನೆ ಮನೆಯಿಂದ ವಾರಕ್ಕೊಮ್ಮೆ ಕಸ ಸಂಗ್ರಹ ನಡೆಸಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಕೋವಿಡ್ ದಿನಗಳಲ್ಲಿ ಆರೋಗ್ಯ ಇಲಾಖೆ ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಅನನ್ಯ, ಕಾರ್ನಾಡು ಬಳಿಯಿಂದ ಕೆಂಚನಕೆರೆವರೆಗೆ ಇನ್ನಷ್ಟು ಅಪಾಯಕಾರಿ ಒಣಗಿದ ಮರಗಳಿದ್ದು, ಮೆಸ್ಕಾಂ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಸಮಕ್ಷಮದಲ್ಲಿ ತೆರವುಗೊಳಿಸಲಾಗುವುದು. ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅಗತ್ಯ ಎಂದರು.
ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಅಧ್ಯಕ್ಷತೆ ವಹಿಸಿದ್ದರು. ನೋಡಲ್ ಅಧಿಕಾರಿಯಾಗಿ ಶಿಶು ಅಭಿವೃದ್ಧಿ (ಗ್ರಾಮಾಂತರ) ಯೋಜನಾಧಿಕಾರಿ ಹರೀಶ್ ಕೆ ಗ್ರಾಮಸ್ಥರು ಪ್ರಶ್ನೆಗೆ ಉತ್ತರಿಸಿದರು. ಪಂಚಾಯಿತಿ ಸದಸ್ಯರು, ಪಿಡಿಒ ಪೂರ್ಣಿಮಾ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.