ಹೆಣ್ಣು ಭ್ರೂಣ ಹತ್ಯೆ ಮಹಾ ಪಾಪ

13 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಹಿಳೆಯು ಭಾರತದಲ್ಲಿ ತನ್ನದೇ ಆದ ಗೌರವ ಸ್ಥಾನಮಾನ ಹೊಂದಿದ್ದಾಳೆ. ನಮ್ಮ ಸಂಪ್ರದಾಯದಲ್ಲಿ ಪೂಜ್ಯತೆಗೆ ಮಹಿಳೆ ಒಳಗಾಗಿದ್ದಾಳೆ. ಆದರೆ ಇಂದು ನಾವು ಮಹಿಳೆಯನ್ನು ಕಾಣುವ ರೀತಿ ಬದಲಾಗಿದೆ. ಅದು ತಪ್ಪು. ಭ್ರೂಣ ಹತ್ಯೆ ಮಹಾ ಪಾಪ ಎಂಬ ಅರಿವು ಎಲ್ಲರಲ್ಲೂ ಮೂಡಿಸುವ ಅಗತ್ಯತೆ ಇದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಎಫ್. ದೊಡ್ಡಮನಿ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ, ಜಿಲ್ಲಾ ಐಇಸಿ ವಿಭಾಗಗಳು ಮತ್ತು ಕಿಟೆಲ್ ಕಲಾ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಗರ್ಭ ಪೂರ್ವ ಹಾಗೂ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಮಾತನಾಡಿ, ವೈದ್ಯರು, ಸಮಾಜ ಇಬ್ಬರೂ ಕೈಜೋಡಿಸಿ ಹೆಣ್ಣನ್ನು ರಕ್ಷಿಸೋಣ. ಈಗಾಗಲೇ ಭಾರತದಲ್ಲಿ ಲಿಂಗಾನುಪಾತ ಬಹಳ ಕಡಿಮೆ ಇದೆ. ಇದು ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗಿದೆ ಎಂಬ ಎಚ್ಚರಿಕೆಯ ಅರಿವು ನಮಗಿರಲಿ ಎಂದರು.
ಡಾ.ಶಿವಕುಮಾರ ಕುಂಬಾರ ಮಾತನಾಡಿ, ಗರ್ಭ ಪೂರ್ವ ಹಾಗೂ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆಗೆ ಸಂಬಂಧಿಸಿದ ಕಾನೂನುಗಳು ಶಿಕ್ಷೆಯ ಪ್ರಮಾಣ, ಲಿಂಗ ಅಸಮಾನತೆಯ ಪರಿಣಾಮಗಳ ಕುರಿತು ಮಾಹಿತಿ ನೀಡಿದರು.
ಕಾಲೇಜಿನ ಪ್ರಾಚಾರ್ಯ ಡಾ. ರೇಖಾ ಜೋಗುಳ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ ಚಿತ್ತರಗಿ, ಡಾ. ತನುಜಾ ಕೆ.ಎನ್., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಆರ್. ಪಾತ್ರೋಟ, ಎಂ.ಎನ್. ಅಗಡಿ, ರೇಖಾ ಬಾಡಗಿ, ಇತರರು ಇದ್ದರು.
ಡಾ. ಸುರೇಶ ಬಿ. ನ್ಯಾಮತಿ ಸ್ವಾಗತಿಸಿದರು. ಡಾ. ವಿ.ಐ ಶೇಖ ನಿರೂಪಿಸಿದರು. ಡಾ. ಕವಿತಾ ಚಾಂದಗುಡೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net