ಹಣಕಾಸು ವಿಚಾರಕ್ಕೆ ಹತ್ಯೆ

ಕೊಲೆಯಾದ ವ್ಯಕ್ತಿ ಅರವಿಂದ
ಕೊಲೆಯಾದ ವ್ಯಕ್ತಿ ಅರವಿಂದ
Published on

ಪಾಂಡವಪುರ: ತಾಲೂಕಿನ ಚಿನಕುರಳಿಯಲ್ಲಿ ಭಾನುವಾರ ತಡರಾತ್ರಿ ಹಣಕಾಸು ವಿಚಾರಕ್ಕೆ ಮಲಗಿದ್ದ ವ್ಯಕ್ತಿಯ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಲಾಗಿದೆ.

ತಾಲೂಕಿನ ಚಿನಕುರಳಿ ಗ್ರಾಮದ ನಿವಾಸಿ ಅರವಿಂದ (24) ಕೊಲೆಯಾದವ. ಆತನ ಸಂಬಂಧಿ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ತಿರುಮಲಪುರ ಗ್ರಾಮದ ವಿಜಯ್ ಕೊಲೆ ಆರೋಪಿ.

ಘಟನೆ ವಿವರ: ಕೊಲೆಯಾದ ಅರವಿಂದ ಮತ್ತು ವಿಜಯ್ ಸೋದರ ಸಂಬಂಧಿಗಳು. ಆರೋಪಿ ವಿಜಯ್ ಒಂದು ತಿಂಗಳ ಹಿಂದೆ ಸ್ವಗ್ರಾಮದಿಂದ ಚಿನಕುರಳಿಗೆ ಬಂದು ಅರವಿಂದನ ಜತೆಯಲ್ಲಿ ವಾಸವಿದ್ದು, ಚಿನಕುರಳಿ ಗ್ರಾಮದ ರಮೇಶ್ ಅವರಿಗೆ ಸೇರಿದ ಕ್ವಾರಿಯಲ್ಲಿ ಸೈಜು ಹೊಡೆಯುತ್ತಿದ್ದರು ಎನ್ನಲಾಗಿದೆ. ಕೊಲೆಯಾದ ಅರವಿಂದ ಆರೋಪಿ ವಿಜಯ್‌ಗೆ ಒಂದು ವರ್ಷದ ಹಿಂದೆ ಕೊಟ್ಟಿದ್ದ 75,000 ರೂ. ಹಿಂದಿರುಗಿಸುವಂತೆ ಒತ್ತಾಯಿಸುತ್ತಿದ್ದ.

ಜತೆಗೆ ವಿಜಯ್ ಹೆಸರಿನಲ್ಲಿ ಅರವಿಂದ ಸಾಲದ ಮೇಲೆ ಬೈಕ್ ಖರೀದಿಸಿ ಲೋನ್ ಕಟ್ಟಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿಜಯ್ ಅರವಿಂದನಿಂದ ಬೈಕ್ ಕಿತ್ತುಕೊಂಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಭಾನುವಾರ ರಾತ್ರಿ ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದೆ.

ಅರವಿಂದನ ಗರ್ಭಿಣಿ ಪತ್ನಿ ತವರು ಮನೆಗೆ ಹೋಗಿದ್ದ ಹಿನ್ನೆಲೆಯಲ್ಲಿ ಆರೋಪಿ ತನ್ನ ಮತ್ತೊಬ್ಬ ಸ್ನೇಹಿತ ಏಳುಮಲೆಯೊಂದಿಗೆ ಅರವಿಂದನ ಮನೆಯಲ್ಲಿ ಒಟ್ಟಿಗೆ ಮಲಗಿದ್ದ ವೇಳೆ ಕಲ್ಲು ಹೊಡೆಯಲು ಬಳಸುತ್ತಿದ್ದ ಸುತ್ತಿಗೆಯಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ. ಬಳಿಕ ಮನೆಗೆ ಹೊರಗಿನಿಂದ ಬೀಗ ಜಡಿದು ಏಳುಮಲೆಯೊಂದಿಗೆ ಬೆಳ್ಳೂರು ಕ್ರಾಸ್ ಪೊಲೀಸ್ ಠಾಣೆಗೆ ಹೋಗಿ ನಡೆದ ವಿಚಾರವನ್ನು ತಿಳಿಸಿ ಶರಣಾಗಿದ್ದಾನೆ.

ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ಒಪ್ಪಿಸಲಾಯಿತು. ಈ ಸಂಬಂಧ ಪಾಂಡಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net