

ಕೆ.ಆರ್.ಸಾಗರ: ಕೆ.ಆರ್.ಸಾಗರ ಬೃಂದಾವನದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಅವರ ಸುಗಮ ಸಂಗೀತ ಗಾಯನ ಮೋಡಿ ಮಾಡಿತು.
ಬುಧವಾರ ಸಂಜೆ ನಡೆದ ದಸರಾ ವೇದಿಕೆಯಲ್ಲಿ ರಸಸಂಜೆಗೂ ಮುನ್ನ ಕೆಲಹೊತ್ತು ಮಳೆ ಬಂದು ತಂಪನ್ನೆರೆಯಿತು. ನಂತರ ನಡೆದ ಗಾಯನ ಪ್ರೇಕ್ಷಕರ ಮನತಣಿಸಿತು.
ಕನ್ನಡ ಡಿಂಡಿಮ ಕಾರ್ಯಕ್ರಮದಲ್ಲಿ ಜನರು ಹುಚ್ಚೆದು ಕುಣಿದರು. ಉಳುವಾ ಯೋಗಿಯ ನೋಡಲ್ಲಿ ಗೀತೆಯೊಂದಿಗೆ ಪ್ರಾರಂಭ ಮಾಡಿ ಇಡೀ ಕಾರ್ಯಕ್ರಮವನ್ನು ರೈತರಿಗೆ ಅರ್ಪಿಸಿದ ಕಿಕ್ಕೇರಿ ಕೃಷ್ಣಮೂರ್ತಿ ಅವರ ಸಿರಿಕಂಠದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಆನಂದಮಯ ಈ ಜಗಹೃದಯ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಭಾರತಾಂಬೆಯೇ ನಮಗಿಂದು ಪೂಜಿಸುವ ಬಾರಾ ಹಾಗೂ ಮಂಗಳಾರವಿ ಅವರ ಧ್ವನಿಯಲ್ಲಿ ಬೇಂದ್ರೆ ಅವರ ಗೀತೆ, ಮಧು ಮನೋಹರ್ ಅವರು ಹಾಡಿದ ಬಾ ಒಲವೇ, ಈ ಬಾನು ಈ ಚುಕ್ಕಿ ಮತ್ತು ಪ್ರವೀಣ್ ಪ್ರದೀಪ್ ಹಾಡಿದ ಪುತಿನ ಅವರ ‘ಹೆಸರೆ ಇಲ್ಲದವರು’ ಹಾಗೂ ಕೆ.ಎಸ್. ನರಸಿಂಹಸ್ವಾಮಿ ಅವರ ನಾವು ಭಾರತೀಯರು ಜೊತೆಗೆ ದಾಸರ ಪದ, ವಚನಗಳು ಜನಮನದಲ್ಲಿ ಗುನುಗುವಂತೆ ಮಾಡಿತು.
ವಾದ್ಯ ಸಹಕಾರದಲ್ಲಿ ಇಂದುಶೇಖರ್, ರಾಘವೇಂದ್ರ ಪ್ರಸಾದ್,ಕಾರ್ತಿಕ್ ಪಾಂಡವಪುರ, ವಿಲ್ಸನ್, ಭರತ್, ಕೃಷ್ಣ ಇತರರು ಮೆರಗು ನೀಡಿದರು.