ಅಕ್ಕ ಸಮ್ಮೇಳನಕ್ಕೆ ಕಿಕ್ಕೇರಿ ಕೃಷ್ಣಮೂರ್ತಿ ಆಯ್ಕೆ

26kkr-2(8-24
ಕಿಕ್ಕೇರಿಯ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ಅಮೆರಿಕಾದ ಅಕ್ಕ ಸಮ್ಮೇಳನಕ್ಕೆ ತೆರಳುತ್ತಿರುವ ಸಲುವಾಗಿ ಸೋಮವಾರ ಕಿಕ್ಕೇರಿ ಸತೀಶ್ ಅಭಿನಂದಿಸಿದರು.
Published on

ಕಿಕ್ಕೇರಿ: ಕಿಕ್ಕೇರಿಯವರಾದ ಸುಗಮ ಸಂಗೀತ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಇದೇ ಆ.30, 31 ಹಾಗೂ ಸೆ.1ರಂದು ಅಮೆರಿಕದ ರಿಚ್ಮಂಡ್ ಟೌನ್‌ನಲ್ಲಿ ಆಯೋಜಿಸಿರುವ ಅಕ್ಕ ಸಮ್ಮೇಳನಕ್ಕೆ ಆಯ್ಕೆಯಾಗಿದ್ದು, ತವರೂರಿನ ಸಾಹಿತ್ಯಾಭಿಮಾನಿಗಳು, ವಿದ್ಯಾರ್ಥಿಗಳು ಸೋಮವಾರ ಸಂಭ್ರಮ ವ್ಯಕ್ತಪಡಿಸಿದರು.


ಕಿಕ್ಕೇರಿಯಂತಹ ಸಣ್ಣ ಗ್ರಾಮದಲ್ಲಿ ಜನಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತವರಿನ ಕೀರ್ತಿ ಬೆಳಗಿಸುತ್ತಿರುವುದು ಸಂತಸವಾಗಿದೆ ಎಂದು ವಿಶ್ರಾಂತ ಪ್ರಾಂಶುಪಾಲ ಚಂದ್ರಮೋಹನ್ ತಿಳಿಸಿದರು.
ಗಾಯಕರ ನುಡಿ: ನಮ್ಮೂರಿನ ಪ್ರೀತಿ, ಆಶೀರ್ವಾದ ಎಲ್ಲ ಕೀರ್ತಿ ತಂದಿದೆ. ಅಕ್ಕ ಸಮ್ಮೇಳನದಲ್ಲಿ ನಮ್ಮೂರಿನ ಹೆಮ್ಮೆಯ ಒಲವಿನ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ಗೀತೆ ಮತ್ತಷ್ಟು ವಿಶ್ವಮಟ್ಟದಲ್ಲಿ ಹಾಡಿ ಪ್ರಚುರಪಡಿಸುವೆ. ಇವರ ಗೀತೆ ಕಾರ್ಯಕ್ರಮದ ಶೀರ್ಷಿಕೆಯಾಗಿದೆ. ಸುಮಾರು 15 ಬಾರಿ ಅಮೆರಿಕಾ ಪ್ರವಾಸ ಕೈಗೊಂಡಿದ್ದು, ಕೆ.ಎಸ್.ನರಸಿಂಹಸ್ವಾಮಿ ರಥಯಾತ್ರೆ, ಗೀತೆ, ಉಪನ್ಯಾಸವನ್ನು ನಡೆಸಲಾಗಿದೆ. ಕಲೆ, ಕಲಾವಿದ ಜೀವಂತವಾಗಿರಲು ಜನತೆಯ ಪ್ರೀತಿ ಜೀವಾಳ ಎಂಬುದನ್ನು ಅರಿತಿರುವೆ ಎಂದರು.

ಗಾಯಕರ ಪರಿಚಯ: ಕಿಕ್ಕೇರಿ ಅರ್ಚಕ ನಾರಾಯಣಭಟ್ಟ, ರುಕ್ಮಿಣಿ ದಂಪತಿ ಪುತ್ರ. ಸ್ನಾತಕೋತ್ತರ ಪದವಿ, ಪ್ರೌಢಶಾಲೆಯವರಿಗೆ ಕಿಕ್ಕೇರಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವಾಗಲೇ ಶಾಲಾ ಹಂತದಲ್ಲಿ ಗಾಯಕರ ತಂಡ ಕಟ್ಟಿ ಹಾಡುತ್ತಿದ್ದರು. ಬದುಕಿಗಾಗಿ ಬೆಂಗಳೂರು ನಗರಕ್ಕೆ ಪಯಣ. ಗಾನಗಾರುಡಿಗ ಸಿ.ಅಶ್ವಥ್ ಅವರ ಶಿಷ್ಯರಾಗಿ ಪರಿಶ್ರಮದಿಂದ ಅಂತಾರಾಷ್ಟ್ರೀಯ ಮಟ್ಟದ ಸುಗಮ ಸಂಗೀತ ಗಾಯಕರಾಗಿ ಬೆಳೆದರು. ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪಯಣಿಸಿ ಲಕ್ಷಾಂತರ ಆಸಕ್ತ ಕಲಾವಿದರಿಗೆ ಉಚಿತ ತರಬೇತಿ ನೀಡಿದ ಹೆಗ್ಗಳಿಕೆ ಇವರದು. ಸುಮಾರು 25ಕ್ಕೂ ಹೆಚ್ಚು ವಿದೇಶಗಳಲ್ಲಿ ಕನ್ನಡದ ಕಂಪನ್ನು ಪಸರಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net