ವರ್ಷಕ್ಕೊಂದು ಬಾರಿ ಕಿಕ್ಕೇರಮ್ಮನವರ ಪಂಚಮಿ ಪೂಜೆ

02kkr1( 4-25 panchami puje
Published on

 ಕಿಕ್ಕೇರಿ: ಗ್ರಾಮದ ಶಕ್ತಿ, ಭಕ್ತಿದೇವತೆಯಾದ ಕಿಕ್ಕೇರಮ್ಮ ದೇವಿಗೆ ವರ್ಷಕ್ಕೊಂದು ಬಾರಿ ಜಾತ್ರೆಯ ಸಂದರ್ಭದಲ್ಲಿ ಮಾತ್ರ ನಡೆಯುವ ಪಂಚಮಿ ಪೂಜೆಯನ್ನು ವಿಪ್ರ ಸಮುದಾಯದವರು ವಿಜೃಂಭಣೆಯಿಂದ ಬುಧವಾರ ಆಚರಿಸಿದರು.

ಪೂಜಾ ಐತಿಹ್ಯ: ಬಲು ಹಿಂದೆ ದೇವಿಯನ್ನು ವಿಪ್ರ ಸಮುದಾಯದವರು ಮಾತ್ರ ಪೂಜಿಸುತ್ತಿದ್ದರು. ಪೂಜಾ ವಿಷಯದಲ್ಲಿ ಮಹಾಭಕ್ತೆ ಕುರುಬ ಸಮುದಾಯದ ಲಕ್ಕಮ್ಮನಿಗೆ, ವಿಪ್ರ ಅರ್ಚಕರಿಗೆ ಪಂಥವೇರ್ಪಟ್ಟು ಕುರುಬ ಲಕ್ಕಮ್ಮ ವಿಜಯಶೀಲೆಯಾಗುತ್ತಾಳೆ. ಅಂದಿನಿಂದ ದೇವಿಯನ್ನು ಹಾಲುಮತಸ್ಥರು ಪೂಜಿಸುತ್ತ ಬಂದಿದ್ದು, ವರ್ಷಕ್ಕೊಮ್ಮೆ ಜಾತ್ರಾ ಸಂದರ್ಭದಲ್ಲಿ ಪಂಚಮಿ ದಿನದ ಪೂಜೆಯನ್ನು ಮಾತ್ರ ವಿಪ್ರರು ಪೂಜಿಸುವುದು ವಿಶೇಷವಾಗಿದೆ.

ಅಯ್ಯನಕೊಪ್ಪಲು ಜೋಯಿಸ್ ಕುಟುಂಬ, ಮಹಾಲಕ್ಷ್ಮೀ ಪಂಚಮಿ ಪೂಜಾ ಸೇವಾ ಸಮಿತಿ ನಡೆಸುವ ವಿಶೇಷ ಪೂಜಾ ಕೈಂಕರ್ಯ ವಿಪ್ರ ಸಮುದಾಯದವರಿಗೆ ವರ್ಷಕ್ಕೊಂದು ಬಾರಿ ಮಾತ್ರ ಪೂಜಿಸಲು ಅವಕಾಶವಿರುವ ಈ ವಿಶೇಷ ದಿನದಲ್ಲಿ ದೇವಿಯ ಒಕ್ಕಲಿನ ಭಕ್ತ ಸಮೂಹದವರು ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದರು.

ಜಿಲ್ಲೆ, ರಾಜ್ಯ, ಹೊರರಾಜ್ಯವಲ್ಲದೆ ಹೊರ ರಾಷ್ಟ್ರಗಳಿಂದಲೂ ದೇವಿಯ ಒಕ್ಕಲಿನ ವಿಪ್ರ ಸಮುದಾಯದವರು ಗ್ರಾಮದ ಹೊರವಲಯದಲ್ಲಿರುವ ಕಿಕ್ಕೇರಮ್ಮ ಗುಡಿಯಲ್ಲಿ ದೇವಿ ಆರಾಧಿಸಿ ಪೂಜಿಸಲು ಸಂಭ್ರಮದಿಂದ ಭಾಗವಹಿಸಿದ್ದರು. ದೇವಿಗೆ ಗಂಗಾಜಲಾಭಿಷೇಕ ನೆರವೇರಿಸಿದರು. ಪಂಚಾಮೃತ ಅಭಿಷೇಕ, ವಿವಿಧ ದ್ರವ್ಯಗಳ ಅಭಿಷೇಕ ನೆರವೇರಿಸಿದರು. ವಿವಿಧ ಪರಿಮಳ ಪುಷ್ಪಗಳಿಂದ ದೇವಿಗೆ ಅಲಂಕರಿಸಿದರು. ಒಡವೆ, ವಸ್ತ್ರಗಳಿಂದ ಶೃಂಗರಿಸಿದರು. ವೇದಪಾರಾಯಣ ಮಾಡಿದರು. ಧೂಪ ದೀಪಾದಾರತಿ ಬೆಳಗಿದರು. ದೇವಿಗೆ ಸೀರೆ, ಕುಪ್ಪಸ, ಬಳೆ, ಬೆಲ್ಲ, ಅಕ್ಕಿ ಮತ್ತಿತರ ಮಂಗಳದ್ರವ್ಯ ವಸ್ತುಗಳಿಂದ ಮಡಿಲು ತುಂಬಿದರು. ಸುಹಾಸಿನಿ ಪೂಜೆ, ಕುಂಕುಮಾರ್ಚನೆ ಮತ್ತಿತರ ಅರ್ಚನೆಗಳನ್ನು ದೇವಿಗೆ ಅರ್ಪಿಸಿದರು.

ಮೂಲದೇವಿ, ಉತ್ಸವಮೂರ್ತಿಗೆ ವಿಶೇಷ ಅಲಂಕಾರ ಮಾಡಿ ದೇವಿಯ ಮುಂದೆ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ನಂತರ ಸುಬ್ರರಾಯ ಛತ್ರದಲ್ಲಿ ಸಾಮೂಹಿಕ ಭೋಜನ ವ್ಯವಸ್ಥೆ, ಸಮಿತಿಯಿಂದ ಸಭೆ ನಡೆದು ಸಾಧಕ ಬಾಧಕಗಳನ್ನು ಚರ್ಚಿಸಲಾಯಿತು.

ಕಿಕ್ಕೇರಮ್ಮ ಪಂಚಮಿ ಸೇವಾ ಸಮಿತಿಯ ಕೆ.ಎನ್. ಗೌರಿಶಂಕರ್, ಕೆ. ಸೋಮಶೇಖರ್, ಸತ್ಯನಾರಾಯಣ, ಕೆ.ಎಸ್. ಅನಂತಸ್ವಾಮಿ, ನಾಗರಾಜ್‌ಭಾರ್ಗವ್, ಶಾಂತಲಾ ಭಾರ್ಗವ್, ಅಂಬಿಕಾ ಪ್ರಸಾದ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net