

ಕಿಕ್ಕೇರಿ: ವಿಜಯನಗರದಿಂದ ಬಂದು ನೆಲೆಸಿರುವ ಕಿಕ್ಕೇರಿ-ಲಕ್ಷ್ಮೀಪುರ ಅವಳಿ ಗ್ರಾಮದ ಅದಿದೇವತೆಯಾದ ಕಿಕ್ಕೇರಮ್ಮ (ಮಹಾಲಕ್ಷ್ಮೀ) ಅವರ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.
ಇಡೀ ರಾತ್ರಿ ಅವಳಿ ಗ್ರಾಮದಲ್ಲಿ ಮುತ್ತಿನ ಪಲ್ಲಕ್ಕಿಯಲ್ಲಿ ದೇವಿಯ ಮೆರವಣಿಗೆ ಸಾಗಿತು. ದೇವಿಯ ಮೆರವಣಿಗೆ ಬ್ರಾಹ್ಮಣರ ಬೀದಿಯಲ್ಲಿ ಒಂದು ವಾರದವರೆಗೆ ನಿತ್ಯವೂ ಮುಂಜಾನೆ ಹಾಗೂ ಗೋಧೂಳಿ ಸಮಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ನೆರವೇರಿತು. ದೇವಿಗೆ ಪ್ರತಿನಿತ್ಯ ಉಷೆ ಕಾಲದಲ್ಲಿ ವಿವಿಧ ಪುಷ್ಪಗಳಿಂದ ಅಲಂಕಾರ, ಒಡವೆ, ವಸ್ತ್ರಗಳಿಂದ ಅಲಂಕರಿಸಲಾಗಿತ್ತು. ಬಾಣ ಬಿರುಸು, ಮಂಗಳವಾದ್ಯದೊಂದಿಗೆ ದೇವಿಯ ಸ್ತ್ರೋತ್ರ ಮಾಡುತ್ತ ಭಕ್ತರು ಸಾಗಿದರು.
ಲಕ್ಷ್ಮೀಪುರ ಗ್ರಾಮದ ಹೊರವಲಯದಲ್ಲಿರುವ ಬನ್ನಿಮಂಟಪದ ಬಳಿ ದೇವಿಯ ಮೆರವಣಿಗೆ ತೆರಳಿತು. ದೇವಿಯನ್ನು ಮಂಟಪದಲ್ಲಿ ಕೂರಿಸಿ ಧೂಪ, ದೀಪಧಾರತಿ ಬೆಳಗಲಾಯಿತು. ಶಮಿವೃಕ್ಷ ಛೇದಿಸಿ ಭಕ್ತರಿಗೆ ಪತ್ರೆಯನ್ನು ವಿಜಯದ ಸಂಕೇತವಾಗಿ ವಿತರಿಸಲಾಯಿತು.