

ವಿಜಯಪುರ: ನಗರದ ಬಿಎಲ್‌ಡಿಇ ಡೀಮ್ಡ್ ವಿವಿಯ ಶ್ರೀ ಬಿ.ಎಂ. ಪಾಟೀಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಸೇರಿದಂತೆ ಮೂತ್ರಪಿಂಡ ಕಾಯಿಲೆಗಳಿಗೆ ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ ಹೇಳಿದರು.
ನಗರದ ಬಿಎಲ್‌ಡಿಇ ಡೀಮ್ಡ್ ವಿವಿಯ ಶ್ರೀ ಬಿ.ಎಂ. ಪಾಟೀಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಶ್ವ ಕಿಡ್ನಿ ದಿನಾಚರಣೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಸೇವೆ ಲಭ್ಯವಿದ್ದು, ಕಳೆದ ಒಂದೂವರೆ ವರ್ಷದಲ್ಲಿ ಆರು ಜನರಿಗೆ ಮೂತ್ರಪಿಂಡ ಕಸಿ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಲಭ್ಯವಿರುವ ಸೇವೆಗಳನ್ನು ಮೂತ್ರಪಿಂಡ ಸಂಬಂಧಿಸಿದ ರೋಗಿಗಳು ಸದುಪಯೋಗ ಪಡೆದುಕೊಳಳ್ಳುವಂತೆ ಅವರು ತಿಳಿಸಿದರು.
ಮೂತ್ರ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಸ್.ಬಿ. ಪಾಟೀಲ ಮಾತನಾಡಿ, 40 ವರ್ಷ ಮೇಲ್ಪಟ್ಟ ಜನರು ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಅದರಿಂದ ಆರೋಗ್ಯದ ಸ್ಥಿತಿಗತಿ ಗುರುತಿಸಲು ಸುಲಭವಾಗಲಿದೆ. ರೋಗದ ಲಕ್ಷಣಗಳು ಕಂಡುಬಂದರೆ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಬೇಗ ಗುಣಮುಖರಾಗಬಹುದು ಎಂದು ಸಲಹೆ ನೀಡಿದರು.
ನೆಫ್ರಾಲಾಜಿ ವಿಭಾಗದ ಡಾ. ಸಂದೀಪ ಪಾಟೀಲ ಮಾತನಾಡಿ, ಮೆದುಳು ನಿಷ್ಕ್ರೀಯವಾದ ರೋಗಿಗಳಿಂದ ಅಂಗಾಂಗ ದಾನ ಪಡೆಯಲು ಆಸ್ಪತ್ರೆಯು ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿದೆ. ಅಂಗಾಂಗ ದಾನ ಮಾಡುವವರು ಮತ್ತು ಅಂಗಾಂಗ ಅವಶ್ಯಕತೆ ಇರುವವರು ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಕೊಳ್ಳುವಂತೆ ಮಾಹಿತಿ ನೀಡಿದರು.
ಕಿಡ್ನಿ ಕಸಿ ಮಾಡಿಸಿಕೊಂಡವರನ್ನು ಸನ್ಮಾನಿಸಲಾಯಿತು. ಶಿಬಿರದಲ್ಲಿ 115 ಜನರಿಗೆ ಉಚಿತ ತಪಾಸಣೆ ನಡೆಸಲಾಯಿತು. ಡಾ. ವಿನಯ ಕುಂದರಗಿ, ಡಾ. ಸಂತೋಷ ಪಾಟೀಲ, ಡಾ. ಬಸವರಾಜ ಸಜ್ಜನ ಮತ್ತಿತರರಿದ್ದರು.