

ಮೈಸೂರು: ಕೇಂದ್ರ ಸರ್ಕಾರ ಎನ್‌ಎಚ್‌ಎಂ ಯೋಜನೆ ಅಡಿ ದೇಶದ 750 ಜಿಲ್ಲೆಗಳಲ್ಲಿ ಡಯಾಲಿಸೀಸ್ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.
ಕರ್ನಾಟಕ ರಾಜ್ಯ ಯುರಾಲಜಿ ಅಸೋಸಿಯೇಷನ್‌ನ 30ನೇ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ನಗರದ ಹೆಬ್ಬಾಳಿನ ನಾರ್ಥ್ ಅವೆನ್ಯೂ ಸಭಾಂಗಣದಲ್ಲಿ ಆಯೋಜಿಸಿದ್ದ 3 ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಕೇಂದ್ರಗಳಲ್ಲಿ ಡಯಾಲಿಸೀಸ್ ಕೇಂದ್ರಗಳನ್ನು ಸ್ಥಾಪನೆ ಮಾಡುವುದರಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ವೈದ್ಯರು ರೋಗಿಯನ್ನು ಪರೀಕ್ಷಿಸಿದ ಮೇಲೆ ತೆಗೆದುಕೊಳ್ಳುವ ನಿರ್ಧಾರಗಳು ಬಹಳ ಮುಖ್ಯವಾಗಿರುತ್ತವೆ. ರೋಗಿಯ ಕಾಯಿಲೆ ಸ್ವರೂಪಕ್ಕಿಂತ ರೋಗಿಗೆ ನೀಡುವ ಚಿಕಿತ್ಸೆಯ ಸ್ವರೂಪ ಹೆಚ್ಚಾಗಿರಬಾರದು. ಹೆಚ್ಚುತ್ತಿರುವ ವೈದ್ಯಕೀಯ ತಾಂತ್ರಿಕತೆ ಹಾಗೂ ಔಷಧ ಮಾರುಕಟ್ಟೆಯ ಮಧ್ಯೆ ಸಿಲುಕಿ ವೈದ್ಯರು ಚಿಕಿತ್ಸೆ ನೀಡಬಾರದು ಎಂದರು.
ಕಿಡ್ನಿ ಶಸ್ತ್ರಚಿಕಿತ್ಸೆ ಹಾಗೂ ಕಿಡ್ನಿ ವೈಫಲ್ಯದ ಅರಿವಿನ ಬಗ್ಗೆ ಗ್ರಾಮೀಣ ಮತ್ತು ನಗರವಾಸಿಗಳಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬರುತ್ತಿದ್ದು ಸರ್ಕಾರ ಇದನ್ನು ಹೋಗಲಾಡಿಸಬೇಕು. ಈ ಎರಡು ರೋಗ ಲಕ್ಷಣಗಳನ್ನು ಅಸಂಕ್ರಾಮಿಕ ರೋಗವೆಂದು ಘೋಷಿಸಬೇಕು ಎಂದರು.
ದೇಶದಲ್ಲಿ 50 ಕೋಟಿ ಜನರನ್ನು ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ಪರೀಕ್ಷೆಗೆ ಒಳಪಡಿಸಲಾಗಿದ್ದು 28 ಲಕ್ಷ ಜನ ರೋಗಿಗಳಿಗೆ ಡಯಾಲಿಸೀಸ್ ನಡೆಯುತ್ತಿದೆ. 3.2 ಕೋಟಿ ಡಯಾಲೀಸಿಸ್ ಸೆಷನ್‌ಗಳು ನಡೆಯುತ್ತಿವೆ. ಸಕ್ಕರೆ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡ ಕಿಡ್ನಿ ವೈಫಲ್ಯಕ್ಕೆ ಮುಖ್ಯಕಾರಣವಾಗಿದ್ದು, ವೈದ್ಯರ ಸಲಹೆ ಮೇರೆಗೆ ಈ ಎರಡು ರೋಗಗಳನ್ನು ಹತೋಟಿಯಲ್ಲಿಟ್ಟುಕೊಂಡರೆ ಕಿಡ್ನಿ ವೈಫಲ್ಯವನ್ನು ತಡೆಗಟ್ಟಬಹುದು ಎಂದು ಸಲಹೆ ನೀಡಿದರು.
ಆಂಜಿಯೋಗ್ರಾಂಗೆ ಒಳಪಡುವ ಶೇ.40ರಿಂದ 50ರಷ್ಟು ರೋಗಿಗಳಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದರೆ, ಇದರಲ್ಲಿ ಶೇ.20ರಷ್ಟು ಜನರು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುತ್ತಾರೆ. ಶೇ.50 ರಿಂದ ಶೇ.60ರಷ್ಟು ಕಿಡ್ನಿ ವೈಫಲ್ಯವಿರುವ ರೋಗಿಗಳು ಹೃದಯ ಸಂಬಂಧಿತ ಕಾಯಿಲೆಗೆ ತುತ್ತಾಗುತ್ತಾರೆ. ಬದಲಾದ ಜೀವನ ಶೈಲಿಯಿಂದ ಕಾಯಿಲೆಗಳು ಹೆಚ್ಚಾಗುತ್ತಿರುವುದರಿಂದ ವೈದ್ಯರು ಹಾಗೂ ಎಲ್ಲ್ಲ ಆಸ್ಪತ್ರೆಗಳು ಅಂಗಾಂಗಗಳ ದಾನಕ್ಕೆ ಪ್ರೋತ್ಸಾಹಿಸಬೇಕು ಎಂದರು.
ಎಲ್ಲ ವೈದ್ಯಕೀಯ ಕಾಲೇಜುಗಳು ಅಂಗಕಸಿ ಕೇಂದ್ರ ಇಲ್ಲದಿದ್ದರೂ ಸಹ ಅಂಗಾಂಗ ರಟ್ರೈಮಲ್ ಯೂನಿಟ್‌ಗಳನ್ನು ಹೊಂದುವುದು ಉತ್ತಮ. ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡುವಾಗ ಹೆಚ್ಚಿನ ವೈದ್ಯರನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಮೈಸೂರು ಮೆಡಿಕಲ್ ಕಾಲೇಜಿನ ಡೀನ್ ಹಾಗೂ ನಿರ್ದೇಶಕಿ ಡಾ.ಕೆ.ಆರ್.ದಾಕ್ಷಾಯಿಣಿ, ಅಸೋಸಿಯೇಷನ್ ಅಧ್ಯಕ್ಷರಾದ ಡಾ.ಶ್ರೀಕಾಂತ್ ಮೆಹರ್‌ವಾಡೆ, ಪದಾಧಿಕಾರಿಗಳಾದ ಡಾ.ರಂಗನಾಥ್ ಎಂ.ಎಸ್.ಡಾ.ಕಿರಣ್‌ಕುಮಾರ್, ಡಾ. ಸಚಿನ್ ಧಾರವಾಡಕರ್, ಡಾ.ಆರ್.ಬಿ.ನರ್ಲಿ, ಡಾ.ಚಂದ್ರಮೋಹನ್‌ರೆಡ್ಡಿ, ನೆಪ್ರೋಲಜಿ ಸಂಸ್ಥೆಯ ನಿರ್ದೇಶಕ ಡಾ. ಶಿವಲಿಂಗಯ್ಯ, ಮೈಸೂರು ನೆಪ್ರೋಲಜಿ ಸಂಸ್ಥೆಯ ಮುಖ್ಯಸ್ಥ ಡಾ.ಜೆ.ಬಿ.ನಾಗೇಂದ್ರ, ವೈದ್ಯರಾದ ಡಾ.ದಯಾನಂದ, ಡಾ.ಆರ್.ಕೇಶವಮೂರ್ತಿ, ಡಾ.ಎಚ್.ಎಲ್.ಪ್ರಸಾದ್, ಡಾ.ಪ್ರಕಾಶ್‌ಪ್ರಭು, ಡಾ.ಮಾದಪ್ಪ, ಡಾ.ಅಮೃತ್‌ರಾಜ್‌ಗೌಡ ಇತರರು ಇದ್ದರು.