

ಮೈಸೂರು: ರಸ್ತೆಯಲ್ಲಿ ತಮ್ಮ ಪರಿಚಿತರೊಂದಿಗೆ ಮಾತನಾಡುತ್ತಾ ನಿಂತಿದ್ದ ಮಹಿಳೆಯ 35 ಗ್ರಾಂ ಚಿನ್ನದ ಸರವನ್ನು ಮೊಪೆಡ್‌ನಲ್ಲಿ ಬಂದ ಖದೀಮರಿಬ್ಬರು ಕಸಿದು ಪರಾರಿಯಾಗಿದ್ದಾರೆ.
ಸರಸ್ವತಿಪುರಂ ಮೂರನೇ ಮೇನ್ ನಿವಾಸಿ ಮಾಲತಿ (38) ಸರ ಕಳೆದುಕೊಂಡವರು. ಇವರು ಸರಸ್ವತಿಪುರಂನ ಗ್ರಂಥಾಲಯದ ಬಳಿಯ ರಸ್ತೆಯಲ್ಲಿ ಬುಧವಾರ ರಾತ್ರಿ 9.30ರಲ್ಲಿ ತಮ್ಮ ಪರಿಚಿತರೊಂದಿಗೆ ಮಾತನಾಡುವಾಗ ಹಿಂದಿನಿಂದ ನಂಬರ್ ಪ್ಲೇಟ್ ಇಲ್ಲದ ಮೊಪೆಡ್‌ನಲ್ಲಿ ಮಾಸ್ಕ್ ಹಾಕಿಕೊಂಡು ಬಂದ ಖದೀಮರು ಮುಂದೆ ಹೋಗಿ ರಿವರ್ಸ್ ತೆಗೆದುಕೊಂಡು ಬಂದು ಮಹಿಳೆಯ ಸರ ಅಪಹರಿಸಿದ್ದಾರೆ.
ಈ ಸಂಬಂಧ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಡೆದಿರುವ ಸ್ಥಳದ ಸಿಸಿ ಕ್ಯಾಮರಾಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.