ಯುವಕನಿಂದ ಬಾಲಕಿ ಅಪಹರಣ

Crime Logo
Published on

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಗಂಡಸಿ ಠಾಣೆ ವ್ಯಾಪ್ತಿಯ ಗ್ರಾಮವೊಂದರ ಅಪ್ರಾಪ್ತೆಯನ್ನು ಅಪಹರಣ ಮಾಡಿದ್ದು, ಬಾಲಕಿಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಕುಡುಕುಂದಿ ಗ್ರಾಮದ ಮಿಥುನ್ (30) ಈ ಕೃತ್ಯ ಎಸಗಿದ್ದಾನೆ ಎಂದು ಬಾಲಕಿ ತಾಯಿ ಗಂಡಸಿ ಪೊಲೀರಿಗೆ ದೂರು ನೀಡಿದ್ದಾರೆ. ಅಪಹರಣಕ್ಕೆ ಒಳಗಾಗಿರುವ ಬಾಲಕಿ (13) ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಾಳೆ. ಐದು ವರ್ಷದ ಹಿಂದೆ ಬಾಲಕಿಯ ತಂದೆ ನಿಧನರಾಗಿದ್ದು, ತಾಯಿಯೇ ಇಬ್ಬರು ಮಕ್ಕಳನ್ನು ಸಾಕುತ್ತಿದ್ದಾರೆ.

ಆ.1ರಂದು ರಾತ್ರಿ 7.30ರ ಸುಮಾರಿಗೆ ಬಾಲಕಿ ತಾಯಿ ಡೇರಿಗೆ ಹಾಲು ಹಾಕಲು ಹೋಗಿದ್ದರು. ವಾಪಸ್ ಬಂದು ನೋಡಿದಾಗ ಮನೆಯಲ್ಲಿ ಮಗಳು ಇರಲಿಲ್ಲ. ಇದರಿಂದ ಭಯಗೊಂಡು ತಾಯಿ ಅಕ್ಕಪಕ್ಕದ ಮನೆ ಸೇರಿದಂತೆ ಎಲ್ಲೆಡೆ ಹುಡುಕಾಡಿದರೂ ಮಗಳ ಸುಳಿವು ಸಿಗಲಿಲ್ಲ. ಕೆಲ ಹೊತ್ತಿನ ನಂತರ ಮಿಥುನ್ ಎಂಬಾತ ತನ್ನ ಮಗಳನ್ನು ಕರೆದುಕೊಂಡು ಹೋಗಿದ್ದಾನೆ ಎಂಬ ವಿಷಯ ತಿಳಿದಿದ್ದು, ಈ ಬಗ್ಗೆ ಗಂಡಸಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಬಾಲಕಿ ತಾಯಿ ನೀಡಿದ ದೂರಿನ ಮೇರೆಗೆ ಮಿಥುನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net