ತಾಯಂದಿರಿಂದ ಹೆತ್ತ ಮಕ್ಕಳ ಅಪಹರಣ

shashikumar
Published on

ಧಾರವಾಡ: ಪ್ರಿಯಕರರೊಂದಿಗೆ ಸೇರಿ ತಾಯಂದಿರಿಬ್ಬರು ಹೆತ್ತ ಅಪ್ರಾಪ್ತ 6 ಮಕ್ಕಳನ್ನೇ ಅಪಹರಣ ಮಾಡಿ ಹಣದ ಬೇಡಿಕೆ ಇಟ್ಟಿದ್ದ ಪ್ರಕರಣವನ್ನು ಭೇದಿಸುವಲ್ಲಿ ಇಲ್ಲಿಯ ವಿದ್ಯಾಗಿರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮುತ್ತುರಾಜ ಆತನ ಪ್ರೇಯಸಿ ರೇಷ್ಮಾ ಅಲಿಯಾಸ್ ರಶ್ಮಿ ಹಾಗೂ ಸುನಿಲ್ ಕರಿಗಾರ ಆತನ ಪ್ರೇಯಸಿ ಪ್ರಿಯಾಂಕಾ ಬಂಧಿತರು.

ನ. 7ರಂದು ಧಾರವಾಡದ ಟೋಲ್ ನಾಕಾ ಪ್ರದೇಶದಲ್ಲಿ ಘಟನೆ ನಡೆದಿತ್ತು. ರೇಷ್ಮಾ ಪತಿ ದೀಪಕ ಸಾಂಬ್ರಾಣಿ ಅಪಹರಣವಾಗಿದ್ದರ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಿಸಿದ್ದರು.

ಬಂಧಿತ ರೇಷ್ಮಾ ಹಾಗೂ ಪ್ರಿಯಾಂಕಾಗೆ ತಲಾ ಮೂವರು ಮಕ್ಕಳಿದ್ದಾರೆ. ಪ್ರಿಯಕರರೊಂದಿಗೆ ಸೇರಿ ಈ ಇಬ್ಬರು ಕಿರಾತಕಿಯರು ತಮ್ಮ ಆರು ಮಕ್ಕಳನ್ನು ಅಪಹರಣ ಮಾಡಿದ್ದರು. ಕೊನೆಗೆ ಪ್ರೇಮಿಗಳ ಮೂಲಕ ತಮ್ಮ ಮನೆಯವರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. 10 ಲಕ್ಷ ರೂ. ಕೊಡದೇ ಇದ್ದಲ್ಲಿ ಮಕ್ಕಳ ಮೇಲೆ ಸೇಡು ತೀರಿಸಿಕೊಳ್ಳವುದಾಗಿ ಬೆದರಿಕೆ ಹಾಕಿದ್ದರು.

ಪ್ರಕರಣದ ಬೆನ್ನು ಬಿದ್ದ ಪೊಲೀಸರು ಬೆಂಗಳೂರು, ಮಹಾರಾಷ್ಟ್ರ, ಗೋವಾ, ಹೈದರಾಬಾದ್ ಇತರೆಡೆ ಹುಡುಕಾಡಿದ್ದರು. ಬೆಂಗಳೂರಿನ ಹೆಬ್ಬಾಳದಲ್ಲಿ ಆರೋಪಿಗಳ ಚಲನವಲನ ಪತ್ತೆಯಾಗಿತ್ತು. ಆರೋಪಿಗಳನ್ನು ಬಂಧಿಸಿ ಕರೆತಂದಿದ್ದೇವೆ. ಆರು ಮಕ್ಕಳನ್ನು ರಕ್ಷಿಸಲಾಗಿದೆ. ಅಪಹರಣ ಸೇರಿ ಇತರ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಆರೋಪಿಗಳಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net