ಹಾಡುಹಗಲೇ ಯುವತಿ ಅಪಹರಣ, ಸಂಜೆಗೆ ಪ್ರಕರಣ ಸುಖಾಂತ್ಯ

doddapete police station
ದೊಡ್ಡಪೇಟೆ ಠಾಣೆ.
Published on

ಶಿವಮೊಗ್ಗ: ನಗರದ ಅಶೋಕ ವೃತ್ತದ ಬಳಿ ಸೋಮವಾರ ಬೆಳಗ್ಗೆ ಯುವತಿಯನ್ನು ಇನ್ನೋವಾ ಕಾರಿನಲ್ಲಿ ಅಪಹರಿಸಿದ್ದ ಪ್ರಕರಣ ಸಂಜೆಗೆ ಸುಖಾಂತ್ಯ ಕಂಡಿದೆ. ಯುವತಿಯೇ ಪ್ರೀತಿಸಿ ಮದುವೆಯಾಗಿದ್ದ ಯುವಕನೊಂದಿಗೆ ತೆರಳಿದ್ದು ಜೋಡಿಯನ್ನು ಪತ್ತೆ ಮಾಡಿದ ಪೊಲೀಸರು ವಿಚಾರಣೆ ಮಾಡಿ ಬಿಟ್ಟು ಕಳುಹಿಸಿದ್ದಾರೆ.

ನಗರದ ಹೊಸಮನೆ ಯುವತಿ ಮತ್ತು ತಾಲೂಕಿನ ಗಾಜನೂರಿನ ಯುವಕ ಪರಸ್ಪರ ಪ್ರೀತಿಸಿ ನಾಲ್ಕು ತಿಂಗಳ ಹಿಂದೆಯೇ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಕೊಂಡಿದ್ದರು. ಸೋಮವಾರ ಸಾಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಯುವತಿ ತನ್ನ ತಾಯಿಯೊಂದಿಗೆ ಅಶೋಕ ವೃತ್ತದ ಬಳಿ ಇರುವ ಹೋಟೆಲ್ ಮುಂದೆ ತೆರಳುತ್ತಿದ್ದಾಗ ಇನ್ನೋವಾ ಕಾರಿನಲ್ಲಿ ಬಂದ ಯುವಕ ಹಾಡುಹಗಲೇ ಯುವತಿ(ಪತ್ನಿ)ಯನ್ನು ಕರೆದೊಯ್ದಿದ್ದ.
ಜತೆಗಿದ್ದ ಯುವತಿಯ ತಾಯಿ ದೊಡ್ಡಪೇಟೆ ಠಾಣೆಗೆ ಬಂದು ತನ್ನ ಪುತ್ರಿಯನ್ನು ಯಾರೋ ಕಾರಿನಲ್ಲಿ ಬಂದು ಅಪಹರಿಸಿರುವುದಾಗಿ ದೂರು ನೀಡಿದ್ದರು. ಹಾಡುಹಗಲೇ ಯುವತಿಯ ಅಪಹರಣದ ವಿಚಾರ ತಿಳಿದು ಕಾರ್ಯಪ್ರವೃತ್ತರಾದ ಪೊಲೀಸರು ಅಶೋಕ ವೃತ್ತದ ಬಳಿ ಇದ್ದ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಇನ್ನೋವಾ ಕಾರಿನ ಬೆನ್ನು ಬಿದ್ದಿದ್ದರು.
ಪೊಲೀಸರು ಹಿಂಬಾಲಿಸುತ್ತಿರುವುದನ್ನು ಅರಿತ ಜೋಡಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಠಾಣೆಗೆ ತೆರಳಿ ಅಲ್ಲಿ ಪೊಲೀಸರಿಗೆ ರಕ್ಷಣೆ ಮೊರೆ ಇಟ್ಟಿದ್ದರು. ಇಬ್ಬರೂ ವಯಸ್ಕರಾಗಿದ್ದು ಪರಸ್ಪರ ಪ್ರೀತಿಸಿ ಮದುವೆಯಾಗಿರುವ ವಿಚಾರವನ್ನು ತಿಳಿಸಿದ್ದರು. ಮದುವೆಗೆ ಪಾಲಕರ ವಿರೋಧವಿದ್ದ ಕಾರಣ ಮದುವೆ ವಿಚಾರವನ್ನು ಮುಚ್ಚಿಟ್ಟಿದ್ದಾಗಿ ಹೇಳಿದ್ದರು. ಬಳಿಕ ಜೋಡಿಯನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಲವ್ ಮ್ಯಾರೇಜ್ ಆಗಿರುವ ವಿಚಾರ ತಿಳಿಯದ ಪಾಲಕರು ಪುತ್ರಿಯನ್ನು ಅಪಹರಿಸಲಾಗಿದೆ ಎಂದು ಆರೋಪ ಮಾಡಿದ್ದರು.
ಗಾಜನೂರಿನ ಯುವಕ ಸಿಸಿ ಕ್ಯಾಮೆರಾ ಅಳವಡಿಸುವ ಕೆಲಸ ಮಾಡಿಕೊಂಡಿದ್ದು ಹೊಸಮನೆಯಲ್ಲಿ ಸಿಸಿ ಕ್ಯಾಮೆರಾ ಅಂಗಡಿ ತೆರೆದಿದ್ದ. ಪಕ್ಕದಲ್ಲೇ ಯುವತಿಯ ಮನೆ ಇದ್ದು ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಬಳಿಕ ಮನೆಯವರಿಗೆ ತಿಳಿಯದೇ ಪ್ರೇಮ ವಿವಾಹವಾಗಿದ್ದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net