ಹಾನಗಲ್ಲದಲ್ಲಿ ಯುವತಿ ಅಪಹರಣ ಪ್ರಕರಣ; ತಡರಾತ್ರಿ ಪೊಲೀಸ್ ಠಾಣೆಗೆ ಮುತ್ತಿಗೆ

crime
Published on

ಹಾನಗಲ್ಲ: ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ನ್ಯಾಯಾಧೀಶರೆದುರು ಯುವತಿ, ‘ತಾನು ಮತ್ತು ಯುವಕ ಸ್ವ ಇಚ್ಛೆಯಿಂದ ಮದುವೆಯಾಗಿದ್ದೇವೆ. ಪಾಲಕರೊಂದಿಗೆ ತೆರಳುವುದಿಲ್ಲ’ ಎಂದು ಹೇಳಿಕೆ ನೀಡಿದ್ದರಿಂದ ಯುವತಿಯನ್ನು ಪೊಲೀಸರು ಠಾಣೆಗೆ ಕರೆತಂದು ಮುಚ್ಚಳಿಕೆ ಬರೆಸಿಕೊಂಡು ಪ್ರಕರಣ ಇತ್ಯರ್ಥಪಡಿಸಿದ್ದರು. ಆದರೆ, ಗುರುವಾರ ತಡರಾತ್ರಿ ಯುವತಿಯ ಕುಟುಂಬದವರು ಹಾಗೂ ಕಲಾಲ ಸಮಾಜದವರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಯವತಿಯನ್ನು ತಂದೆ-ತಾಯಿ ಜತೆ ಕಳುಹಿಸಬೇಕು ಎಂದು ಪಟ್ಟು ಹಿಡಿದು ಕುಳಿತ ಘಟನೆ ಜರುಗಿತು.

ಅಪಹರಣ ಪ್ರಕರಣ ಇತ್ಯರ್ಥವಾಗಿದೆ ನಿಜ. ಯುವತಿ ಪಾಲಕರೊಂದಿಗೆ ಹೋಗುವುದಿಲ್ಲ ಎಂಬ ಹೇಳಿಕೆಗೆ ನ್ಯಾಯಾಲಯ ಅಸ್ತು ಎಂದಿದೆ. ಆದರೆ, ಯುವಕನೊಂದಿಗೆ ಕಳಿಸಬಹುದು ಎಂದು ನ್ಯಾಯಾಲಯ ಹೇಳಿಲ್ಲ. ಇದಲ್ಲದೇ ಅನ್ಯ ಕೋಮಿನ ಯುವಕನೊಂದಿಗೆ ವಿವಾಹವಾಗಿರುವ ಕುರಿತು ಯಾವುದೇ ದಾಖಲೆಗಳಿಲ್ಲ. ಮತಾಂತರ ಕಾಯ್ದೆ ಜಾರಿಯಾಗಿದ್ದು, ಅನ್ಯಕೋಮಿನ ಯುವಕನೊಂದಿಗೆ ಮದುವೆಯಾಗಲು ಕಾನೂನು ಅಡಿಯಲ್ಲಿ 30 ದಿನಗಳ ಹಲವು ಪ್ರಕ್ರಿಯೆಗಳಿವೆ. ಮಡಗಾಂವ ದರ್ಗಾದಲ್ಲಿ ಮದುವೆಯಾಗಿರುವ ಕುರಿತು ಯಾವುದೇ ದಾಖಲೆಗಳನ್ನೂ ನೀಡಿಲ್ಲ. ದಾಖಲೆ ತಂದಿದ್ದರೂ ಅದನ್ನು ಕಾನೂನು ಒಪ್ಪುವುದಿಲ್ಲ. ಹೀಗಾಗಿ ಪೊಲೀಸರು ಯುವತಿಯನ್ನು ಯುವಕನೊಂದಿಗೆ ತೆರಳಲು ಬಿಟ್ಟಿದ್ದು ತಪ್ಪು ಎಂದು ಕುಟುಂಬದವರು ವಾದಿಸಿದರು.

ವಿವಾಹವಾಗಿದ್ದರೆ ಅದು, ಉಪನೋಂದಣಾಧಿಕಾರಿ ಕಚೇರಿಯಲ್ಲಿ ಅಧಿಕೃತವಾಗಿ ನೋಂದಣಿಯಾಗಬೇಕು. ಅಲ್ಲಿಯವರೆಗೆ ಯುವತಿಯನ್ನು ಸಾಂತ್ವನ ಕೇಂದ್ರದಲ್ಲಿರಿಸಬೇಕು. ಇಲ್ಲದಿದ್ದಲ್ಲಿ ಪಾಲಕರ ಜವಾಬ್ದಾರಿಗೆ ಒಪ್ಪಿಸಬೇಕಿತ್ತು. ಪೊಲೀಸರು ಈ ಎರಡನ್ನೂ ಮಾಡದೇ ಯುವಕನೊಂದಿಗೆ ಕಳಿಸಿದ್ದಾರೆ. ಮುಂದೆ ಯುವತಿಯ ಜೀವಕ್ಕೆ ಅಪಾಯ ಎದುರಾದರೆ ಯಾರು ಜವಾಬ್ದಾರರು? ಎಂದು ಪಾಲಕರು ಪ್ರಶ್ನಿಸಿ, ಪಿಎಸ್​ಐ ಠಾಣೆಗೆ ಬರುವಂತೆ ಆಗ್ರಹಿಸಿದರು.

ನಂತರ ಇದಕ್ಕೆ ಪ್ರತಿಕ್ರಿಯಿಸಿದ ಪಿಎಸ್​ಐ, ಯುವತಿ ನ್ಯಾಯಾಧೀಶರ ಎದುರು ಸ್ವಯಂಪ್ರೇರಿತ ಹೇಳಿಕೆ ನೀಡಿದ ನಂತರ ಅದರ ಹಿನ್ನೆಲೆಯಲ್ಲಿ ಪ್ರಕರಣ ಇತ್ಯರ್ಥವಾಗಿದೆ. ಹೀಗಾಗಿ ಅವರು ತೆರಳಿದರು. ನಾವು ಯುವತಿಯನ್ನು ಯುವಕನೊಂದಿಗೆ ಕಳಿಸಿಲ್ಲ ಎಂದು ತಿಳಿಸಿದರು. ಆದಾಗ್ಯೂ ಯುವತಿಯನ್ನು ಠಾಣೆಗೆ ಕರೆತರುವುದಾಗಿ ಭರವಸೆ ನೀಡಿದ ನಂತರ ಠಾಣೆಯಲ್ಲಿ ಜಮಾವಣೆಗೊಂಡಿದ್ದ ಸಮಾಜದ ಮುಖಂಡರು ಮನೆಗೆ ತೆರಳಿದರು.

ಶುಕ್ರವಾರ ಸಂಜೆ ಹಾನಗಲ್ಲ ಠಾಣೆಗೆ ಭೇಟಿ ನೀಡಿದ ಎಎಸ್​ಪಿ ಸಿ. ಗೋಪಾಲ, ಡಿವೈಎಸ್​ಪಿ ಮಂಜುನಾಥ ಅವರನ್ನು ಯುವತಿಯ ಪಾಲಕರು ಭೇಟಿ ಮಾಡಿ, ತಮ್ಮ ಮಗಳು ಇನ್ನೂ ಮದುವೆಯಾಗಿಲ್ಲ. ಆದ್ದರಿಂದ ಆಕೆಯನ್ನು ತಮ್ಮ ವಶಕ್ಕೆ ಒಪ್ಪಿಸಬೇಕು ಎಂದು ಕೇಳಿಕೊಂಡರು. ಭಾನುವಾರ ಯುವತಿಯನ್ನು ಕರೆಸಿ ವಿಚಾರಿಸುವುದಾಗಿ ಪಾಲಕರಿಗೆ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ, ಪದವಿ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿರುವ ಯುವತಿ ಓದಿನ ಬಗ್ಗೆ ಗಮನ ಹರಿಸದೇ, ಪ್ರಲೋಭನೆಗೆ ಬಲಿಯಾಗಿದ್ದಾಳೆ, ಕಾನೂನು ಪ್ರಕಾರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆ ನೋಂದಾಯಿಸಿಕೊಂಡಿಲ್ಲವಾದ್ದರಿಂದ ಯುವಕನೊಂದಿಗೆ ಆಕೆ ಹೋಗಿರುವುದು ನೈತಿಕವಾಗಿ ತಪ್ಪು ಎಂದು ಸಮಾಜ ಭಾವಿಸುವುದು ಸಹಜ. ಪಾಲಕರೊಂದಿಗೆ ಹೋಗುವುದಿಲ್ಲ ಎಂದು ಆಕೆ ಹೇಳಿದ್ದರೂ ಸಾಂತ್ವನ ಕೇಂದ್ರಕ್ಕೆ ಕಳುಹಿಸಬಹುದಿತ್ತು ಎಂಬ ಚರ್ಚೆಗಳು ಪಟ್ಟಣದಲ್ಲಿ ವ್ಯಾಪಕವಾಗಿ ನಡೆಯುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net