

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿ ಬಸವರಾಜ ಅಂಬಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಮುಖ ಆರೋಪಿ ಮಂಜುಳಾ ರಾಮನಗಟ್ಟಿ ಸೇರಿ ಏಳು ಜನರನ್ನು ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಹಣಕಾಸಿನ ವ್ಯವಹಾರವೇ ಕಾರಣ ಎನ್ನಲಾಗುತ್ತಿದೆ.
ಅಪಹರಣಕ್ಕೆ ಒಳಗಾದ ವ್ಯಕ್ತಿ, ಬಂಧಿತರ ನಡುವೆ ಬೇರೆ ಬೇರೆ ವ್ಯಕ್ತಿ, ಮೂಲಗಳಿಂದ ಹಣಕಾಸಿನ ವ್ಯವಹಾರಗಳು ನಡೆದಿವೆ. ಇದರಲ್ಲಿ ಬಡ್ಡಿ ವ್ಯವಹಾರ ಕೂಡ ಒಳಗೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಸತ್ಯ ಹೊರಬರಲಿದೆ.
ಕೋಟ್ಯಂತರ ರೂ. ಹಣಕಾಸಿನ ವ್ಯವಹಾರ?: ಬಸವರಾಜ ಕುಟುಂಬಸ್ಥರು ಆರೋಪಿಗಳಿಗೆ ಕೊಡಲು ಎಷ್ಟು ಹಣ ತೆಗೆದುಕೊಂಡು ಹೋಗಿದ್ದರು. ಆ ಹಣ ಎಲ್ಲಿಂದ ಬಂದಿದೆ. ಅಪಹರಣಕ್ಕೆ ಒಳಗಾದ ಉದ್ಯಮಿ ಕೋಟ್ಯಂತರ ರೂ. ಹಣಕಾಸಿನ ವ್ಯವಹಾರ ನಡೆಸುತ್ತಿದ್ದರೆ? ಅದು ಯಾವ ಆದಾಯದಿಂದ ಹಣ ಬರುತ್ತಿತ್ತು. ತೆರಿಗೆ ಪಾವತಿ ಸೇರಿ ಆದಾಯ ಮೂಲ ಕುರಿತು ಸಮಗ್ರ ಮಾಹಿತಿ ಕಲೆ ಹಾಕುತ್ತಿದ್ದೇವೆ. ಈ ಪ್ರಕರಣದಲ್ಲಿ ಹಣ ಮಾಡಬೇಕು, ಐಷಾರಾಮಿಯಾಗಿ ಬದುಕು ಸಾಗಿಸಬೇಕು ಎಂಬ ಆಸೆಯಿಂದ ಈ ಅಪಹರಣ ಮಾಡಿರಬಹುದು ಎಂಬ ಮಾಹಿತ ಇದೆ. ಆದರೆ, ಒಳಗೊಳಗೆ ಕೋಟ್ಯಂತರ ರೂ. ಹಣಕಾಸಿನ ವ್ಯವಹಾರ ನಡೆದಿರುವ ಕುರಿತು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿ ಬಸವರಾಜ ಅಂಬಿ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಗೋಕಾಕ ತಾಲೂಕಿನ ಕೊಣ್ಣೂರಿನ ಮಂಜುಳಾ ರಾಮನಗಟ್ಟಿ ಸಚಿವ ಸತೀಶ ಜಾರಕಿಹೊಳಿ ಆಪ್ತೆ ಎಂಬ ವಿಚಾರ ಇದೀಗ ಎಲ್ಲೆಡೆ ಸುದ್ದಿಯಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಗೋಕಾಕ ತಾಲೂಕಿನ ಆರೋಗ್ಯ ರಕ್ಷಾ ಸಮಿತಿಗೆ ವರ್ಷದ ಹಿಂದೆಯೇ ಸತೀಶ ಜಾರಕಿಹೊಳಿ ಮಂಜುಳಾ ಅವರನ್ನು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿರುವ ಪ್ರತಿ ಹಾಗೂ ಅವರೊಟ್ಟಿಗಿರುವ ಪೋಟೋ ವೈರಲ್ ಆಗಿವೆ.
ಇದಕ್ಕೆ ಪ್ರತಿಕ್ರಿಯೆ ನೀಡುವ ಸಚಿವ ಸತೀಶ ಜಾರಕಿಹೊಳಿ, ಪ್ರತಿದಿನ ನೂರಾರು ಜನರು ಬಂದು ಪೋಟೋ ತೆಗೆಸಿಕೊಂಡು ಹೋಗುತ್ತಾರೆ. ವಿವಾದಗಳು ಆದಾಗ ಈ ಪೋಟೋಗಳು ವೈರಲ್ ಆಗುವುದು ಸಹಜ. ಅಪಹರಣ ಮಾಡಿ ಎಂದು ನಾನು ಹೇಳಿಲ್ಲ ಎಂದು ತಿಳಿಸಿದ್ದಾರೆ.
ಉದ್ಯಮಿ ಅಪಹರಣ ಪ್ರಕರಣದ ತನಿಖೆ ವೇಳೆ ಹಣಕಾಸಿನ ವ್ಯವಹಾರ ಕುರಿತು ಮಾಹಿತಿ ಕಲೆ ಹಾಕುತ್ತಿದ್ದೇವೆ. ಪ್ರಮುಖ ಆರೋಪಿ ಮಂಜುಳಾ ರಾಮನಗಟ್ಟಿ ಕುರಿತು ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ತನಿಖೆ ಮುಗಿದ ಬಳಿಕವೇ ಎಲ್ಲವೂ ಗೊತ್ತಾಗಲಿದೆ. ಡಾ.ಭೀಮಾಶಂಕರ ಗುಳೇದ, ಎಸ್‌ಪಿ