ಅಪಹರಣ ಪ್ರಕರಣ ಸುಖಾಂತ್ಯ

sp
Published on

ಮಂಗಳೂರು: ಬೆಳ್ತಂಗಡಿ ತಾಲೂಕಿನ ಉಜಿರೆಯ ಬಾಲಕ ಅನುಭವ್ (8) ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ.

ಘಟನೆ ನಡೆದು 33 ಗಂಟೆಯೊಳಗೆ 6 ಆರೋಪಿಗಳನ್ನು ಕೋಲಾರದ ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯ ಕೂರ್ನ ಹೊಸಳ್ಳಿಯ ಬೇಕಲ್ ಎಂಬಲ್ಲಿ ಬಂಧಿಸಿದ ಪೊಲೀಸರು, ಬಾಲಕನನ್ನು ಸುರಕ್ಷಿತವಾಗಿ ಪಾಲಕರಿಗೊಪ್ಪಿಸಿದ್ದಾರೆ. ಪ್ರಕರಣದ ಸೂತ್ರದಾರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಮಂಡ್ಯ ದೇವಲಕೆರೆ ನಿವಾಸಿ, ಐಟಿ ಕಂಪನಿ ಉದ್ಯೋಗಿ ರಂಜಿತ್ (22), ಮಂಡ್ಯ ಕೋಡಿಕೆರೆ ನಿವಾಸಿ ಕ್ಯಾಬ್ ಡ್ರೈವರ್ ಹನುಮಂತು (21), ಮೈಸೂರಿನ ವಡಂತಹಳ್ಳಿ ನಿವಾಸಿ ಕ್ಯಾಬ್ ಡ್ರೈವರ್ ಗಂಗಾಧರ(25), ಬೆಂಗಳೂರಿನ ದೊಡ್ಡಮ್ಮನಹಳ್ಳ 2ನೇ ಕ್ರಾಸ್ ನಿವಾಸಿ, ಮೆಕ್ಯಾನಿಕ್ ಕಮಲ್ (22), ಕೋಲಾರದ ಕೂರ್ನಹೊಸಳ್ಳಿಯ ಮಂಜುನಾಥ್(24) ಹಾಗೂ ಮಹೇಶ್ (26) ಬಂಧಿತರು. ಇವರಲ್ಲಿ ಮೊದಲ ನಾಲ್ವರು ಬಾಲಕನನ್ನು ಅಪಹರಿಸಿದ್ದರೆ, ಉಳಿದ ಇಬ್ಬರು ಆರೋಪಿಗಳಿಗೆ ವಸತಿ ವ್ಯವಸ್ಥೆ ಮಾಡಿದ್ದರು. ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳು ಭಾಗಿಯಾಗಿರುವ ಸಾಧ್ಯತೆ ಇದ್ದು, ತನಿಖೆ ನಡೆಯುತ್ತಿದೆ ಎಂದು ದ.ಕ.ಪೊಲೀಸ್ ಅಧೀಕ್ಷಕ ಬಿ.ಎಂ.ಲಕ್ಷ್ಮೀಪ್ರಸಾದ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಕರಣದ ಹಿನ್ನೆಲೆ: ಉಜಿರೆ ರಥಬೀದಿ ಅಶ್ವತ್ಥಕಟ್ಟೆ ನಿವಾಸಿ ನೌಕಾದಳದ ನಿವೃತ್ತ ಉದ್ಯೋಗಿ ಎ.ಕೆ.ಶಿವನ್ ಅವರೊಂದಿಗೆ ಗುರುವಾರ ವಾಕಿಂಗ್ ಮಾಡುತ್ತಿದ್ದಾಗ ಸಂಜೆ 6ರ ವೇಳೆಗೆ ಕಾರಿನಲ್ಲಿ ಬಂದ ತಂಡ ಅನುಭವ್‌ನನ್ನು ಅಪಹರಿಸಿತ್ತು. ಬಳಿಕ 100 ಬಿಟ್ ಕಾಯಿನ್ (17 ಕೋಟಿ ರೂ.)ನೀಡುವಂತೆ ಕರೆ ಮಾಡಿ ಒತ್ತಾಯಿಸಿದ್ದರು. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಲಾಯಿತು.

ಕೋಲಾರ ತಲುಪಿದ್ದರು: ಆರೋಪಿಗಳು ಬಾಲಕನನ್ನು ಉಜಿರೆಯಿಂದ ಅಪಹರಿಸಿ ಕಾರಿನಲ್ಲಿ ಉಪ್ಪಿನಂಗಡಿ, ಸುಳ್ಯ, ಮಡಿಕೇರಿ, ಮಂಡ್ಯ ಮೂಲಕ ಬೆಂಗಳೂರು ತಲುಪಿದ್ದರು. ಅಲ್ಲಿ ಕಮಲ್ ಎಂಬಾತನ ಮನೆಯಲ್ಲಿ 20 ನಿಮಿಷ ವಿಶ್ರಾಂತಿ ಪಡೆದು ಬಳಿಕ ಶುಕ್ರವಾರ ಸಂಜೆ ಕೋಲಾರದ ಬೇಕಲ್‌ನಲ್ಲಿರುವ ಮಹೇಶ ಎಂಬಾತನ ಮನೆಗೆ ತಲುಪಿದ್ದರು. ಮಾಹಿತಿ ಪಡೆದ ಪೊಲೀಸರು ಕೋಲಾರ ಪೊಲೀಸರ ಸಹಕಾರದಿಂದ ಕಾರ್ಯಾಚರಣೆ ನಡೆಸಿ ಶನಿವಾರ ಬೆಳಗ್ಗಿನ ಜಾವ 3 ಗಂಟೆಗೆ ಆರೋಪಿಗಳನ್ನು ಬಂಧಿಸಿ, ಬಾಲಕನನ್ನು ರಕ್ಷಿಸಿದರು.

ಪರಿಚಿತನಿಂದಲೇ 7 ಲಕ್ಷ ರೂ.ಸುಪಾರಿ:  ಅಪಹರಣಕ್ಕೆ ಪರಿಚಿತ ವ್ಯಕ್ತಿಯೇ 7 ಲಕ್ಷ ರೂ.ಗೆ ಸುಪಾರಿ ನೀಡಿರುವುದು ತನಿಖೆಯಿಂದ ಗೊತ್ತಾಗಿದೆ. ಬಾಲಕನ ತಂದೆ ಬಿಜೊಯ್ 3 ವರ್ಷ ಹಿಂದೆ ನೆಟ್‌ವರ್ಕಿಂಗ್ ವ್ಯವಹಾರ ಮಾಡುತ್ತಿದ್ದರು. ಆಗ ಪಾಲುದಾರನಾಗಿದ್ದಾತ ಅಪಹರಣಕ್ಕೆ ಸುಪಾರಿ ನೀಡಿದ್ದ. ಆದರೆ ಆತ ಅಪಹರಣಕಾರರಿಗೆ 7 ಲಕ್ಷ ರೂ. ತಕ್ಷಣ ನೀಡದ ಕಾರಣ ಕೋಲಾರದ ಬೇಕಲ್‌ನ ಮಹೇಶನ ಮನೆಯಲ್ಲಿ ಹಣ ಸಿಗುವ ತನಕ ವಾಸ್ತವ್ಯ ಹೂಡಲು ಆರೋಪಿಗಳು ನಿರ್ಧರಿಸಿದ್ದರು.

ಆರೋಪಿಗಳ ಜಾಡು ಹಿಡಿದ 5 ತಂಡ: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ 5 ಪೊಲೀಸ್ ತಂಡಗಳು ಕಾರ್ಯಾಚರಣೆ ನಡೆಸಿದ್ದವು. ಡಿಸಿಐಬಿ ಇನ್‌ಸ್ಪೆಕ್ಟರ್ ಚೆಲುವರಾಜ್ ತಂಡ ಬೆಂಗಳೂರಿಗೆ, ಬೆಳ್ತಂಗಡಿ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ. ಹಾಗೂ ಪಿಎಸ್‌ಐ ನಂದಕುಮಾರ್ ತಂಡ ಮೂಡಿಗೆರೆ ಹಾಗೂ ಕೋಲಾರ, ಉಪ್ಪಿನಂಗಡಿ ಪಿಎಸ್‌ಐ ಈರಯ್ಯ ತಂಡ ಮಧುಗಿರಿಗೆ, ಬೆಳ್ತಂಗಡಿ ಸಂಚಾರ ವಿಭಾಗದ ಪಿಎಸ್‌ಐ ಕುಮಾರ್ ಕಾಂಬ್ಳೆ ತಂಡ ತುಮಕೂರು, ಬೆಂಗಳೂರಿಗೆ ತೆರಳಿದ್ದವು. ಇನ್‌ಸ್ಪೆಕ್ಟರ್ ರವಿ ಅವರ ತಂಡ ತಾಂತ್ರಿಕವಾಗಿ ತನಿಖೆ ನಡೆಸಿ, ಆರೋಪಿಗಳ ಮಾಹಿತಿ ಕಲೆಹಾಕಿದೆ. ಸಿಸಿ ಕ್ಯಾಮರಾ ದೃಶ್ಯಾವಳಿಗಳಿಂದ ಆರೋಪಿಗಳು ಸಾಗಿರುವ ಪಥ ಗೊತ್ತಾಗಿದೆ. ಮೊಬೈಲ್ ಸಂಖ್ಯೆ ಆಧಾರದಲ್ಲಿ ಆರೋಪಿಗಳು ಬೇಕಲ್ ಗ್ರಾಮದಲ್ಲಿರುವುದು ಖಚಿತಗೊಂಡಿತ್ತು.

ಮಧ್ಯಪ್ರದೇಶದ ಮೊಬೈಲ್ ಸಂಖ್ಯೆ: ಸುಪಾರಿ ನೀಡಿದ ಆರೋಪಿ ಮಧ್ಯಪ್ರದೇಶದಲ್ಲಿ ನೋಂದಣಿಯಾದ ಮೊಬೈಲ್ ಸಂಖ್ಯೆಯಿಂದ ಬಾಲಕನ ತಂದೆ ಜತೆ ವಾಟ್ಸಾಪ್ ಸಂಪರ್ಕ ಹೊಂದಿದ್ದ. ಒಂದು ಬಾರಿ ಕರೆ ಮಾಡಿ ಬಿಟ್ ಕಾಯಿನ್‌ಗೆ ಬೇಡಿಕೆ ಇಟ್ಟಿದ್ದ. ಬಳಿಕ ಸಂದೇಶದ ಮೂಲಕ ಸಂಪರ್ಕದಲ್ಲಿದ್ದ. ಅಪಹರಣಕಾರರು ಬಾಲಕನ ತಂದೆಯೊಂದಿಗೆ ಸಂಪರ್ಕ ಹೊಂದಿರಲಿಲ್ಲ. ಸುಪಾರಿ ನೀಡಿದ ವ್ಯಕ್ತಿ ಎರಡೂ ಕಡೆಯವರೊಂದಿಗೆ ಸಂಪರ್ಕದಲ್ಲಿದ್ದ ಎಂದು ಎಸ್ಪಿ ವಿವರಿಸಿದರು. ಅಪಹರಣ ಬಳಿಕ ಆರೋಪಿಗಳು ಮಗುವನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಆರೋಪಿಗಳ ಜತೆ ಹೊಂದಿಕೊಂಡಿದ್ದ ಮಗು ತುಂಬ ಚಟುವಟಿಕೆಯಿಂದ ಇತ್ತು ಎಂದು ಎಸ್ಪಿ ತಿಳಿಸಿದರು.

ತಾಯಿ ಕಣ್ಣಲ್ಲಿ ಆನಂದಭಾಷ್ಪ: ಮಗು ಸುರಕ್ಷಿತವಾಗಿ ಪತ್ತೆ ಆಗಿರುವುದನ್ನು ಶನಿವಾರ ಬೆಳಗ್ಗಿನ ಜಾವ ಪಾಲಕರಿಗೆ ತಿಳಿಸಲಾಯಿತು. ಮಧ್ಯಾಹ್ನದ ವೇಳೆಗೆ ಕೋಲಾರಕ್ಕೆ ಅವರು ಪಾಲಕರು ತಲುಪಿದ್ದರು. ಎರಡು ದಿನಗಳಿಂದ ಮಗುವನ್ನು ನೋಡದೆ ಗಾಬರಿಗೊಂಡಿದ್ದ ತಾಯಿಯ ಕಣ್ಣಲ್ಲಿ ಆನಂದಭಾಷ್ಪ ತುಂಬಿ ಬಂತು.

ವಿಶೇಷ ಬಹುಮಾನ ಘೋಷಣೆ: 33ಗಂಟೆಯಲ್ಲಿ ಪ್ರಕರಣವನ್ನು ಭೇದಿಸಿದ ತನಿಖಾ ತಂಡಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮೀಪ್ರಸಾದ್ ವಿಶೇಷ ಬಹುಮಾನ ಘೋಷಿಸಿದ್ದಾರೆ. ತಂಡದಲ್ಲಿ ಕಾರ್ಯಾಚರಣೆ ನಡೆಸಿದ ಎಲ್ಲ ಪೊಲೀಸರಿಗೂ ರಿವಾರ್ಡ್ ನೀಡಲಾಗುವುದು. ತಂಡಕ್ಕೆ ವಿಶೇಷ ಪುರಸ್ಕಾರ ನೀಡಲು ಪೊಲೀಸ್ ಮಹಾನಿರ್ದೇಶಕರಿಗೆ ಶಿಾರಸು ಮಾಡಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.

ಬಾಲಕನ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ. ಪೊಲೀಸರು ಉತ್ತಮ ರೀತಿ ಕೆಲಸ ಮಾಡಿದ್ದಾರೆ. ಕೋಲಾರ ಎಸ್ಪಿ ಕೂಡ ಸಹಕಾರ ನೀಡಿದ್ದು, ಪಿಎಸ್‌ಐ ಹಾಗೂ ತಂಡ ನಮ್ಮ ಪೊಲೀಸರಿಗೆ ಸಹಕಾರ ನೀಡಿದೆ.

ಬಿ.ಎಂ.ಲಕ್ಷ್ಮೀ ಪ್ರಸಾದ್ ಎಸ್ಪಿ, ದ.ಕ.

ಮಗ ಸುರಕ್ಷಿತವಾಗಿ ನಮ್ಮ ಕೈ ಸೇರಿದ್ದು ಸಂತೋಷವಾಗಿದೆ. ಪೊಲೀಸರ ಸೇವೆ ಮೆಚ್ಚುವಂಥದ್ದು. ಗ್ರಾಮಸ್ಥರು, ಶಾಸಕರು, ವಿಧಾನಪರಿಷತ್ ಸದಸ್ಯರು ಸಹಕಕಾರ ನೀಡಿದ್ದಾರೆ. ಎಲ್ಲರಿಗೂ ಧನ್ಯವಾದಗಳು.

ಬಿಜೋಯ್ ಮಗುವಿನ ಪಾಲಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net