

ಮಂಗಳೂರು:ನಗರದ ಅತ್ತಾವರ ರಾಜ್ ರೆಸಿಡೆನ್ಸಿ ಬಳಿಯಿಂದ ಬಾಲಕಿಯನ್ನು ಅಪಹರಿಸಿ, ವಿವಿಧ ಕಡೆ ಕರೆದೊಯ್ದು ಅತ್ಯಾಚಾರ ನಡೆಸಿದ ಅಪರಾಧಿ ಬಸವರಾಜ್ ಅಲ್ಲಪ್ಪ ಮಡಿವಾಳರ್‌ಗೆ ನ್ಯಾಯಾಲಯ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ: ನೊಂದ ಬಾಲಕಿಯನ್ನು 2022 ಡಿ.13ರಂದು ಬಸವರಾಜ್ ಪುಸಲಾಯಿಸಿ ಧರ್ಮಸ್ಥಳಕ್ಕೆ ಕರೆಯಿಸಿ, ಅಲ್ಲಿಂದ ಬಸ್ಸಿನಲ್ಲಿ ಬಿಜಾಪುರಕ್ಕೆ ಕರೆದೊಯ್ದು, ಅಲ್ಲಿಂದ ಆಂಧ್ರಪ್ರದೇಶದ ತಿರುಪತಿಗೆ ಕರೆದೊಯ್ದು ಅಲ್ಲಿ ಡಾಬಾವೊಂದರಲ್ಲಿ ಕೆಲಸಕ್ಕೆ ಸೇರಿಸಿ, ಅಲ್ಲಿನ ರೂಮ್‌ನಲ್ಲಿ ವಾಸವಿದ್ದ. ಈ ಸಂದರ್ಭ 2022 ಡಿ.17ರಿಂದ ಜ.4ರ ತನಕ ಆಕೆಯ ಇಚ್ಛೆಗೆ ವಿರುದ್ಧವಾಗಿ ಹಲವು ಬಾರಿ ಅತ್ಯಾಚಾರ ನಡೆಸಿ, ಜೀವ ಬೆದರಿಕೆ ಹಾಕಿದ್ದ. ನೊಂದ ಬಾಲಕಿ ಕಾಣೆಯಾದ ಬಗ್ಗೆ ಆಕೆಯ ಮಾವ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿ ನೊಂದ ಬಾಲಕಿ ಹಾಗೂ ಬಸವರಾಜ್‌ನನ್ನು ತಿರುಪತಿಯಿಂದ ಕರೆ ತಂದಿದ್ದರು. ತನಿಖೆ ನಡೆಸಿ ಅಂದಿನ ಪೊಲೀಸ್ ನಿರೀಕ್ಷಕ ಲೋಕೇಶ್ ಎ.ಸಿ. ಅವರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಎಫ್.ಟಿ.ಎಸ್.ಸಿ.-2 ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಈ ಪ್ರಕರಣದಲ್ಲಿ ಅಭಿಯೋಜನೆ ಪರ 13 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು. ದಾಖೆಗಳು, ಪೂರಕ ಸಾಕ್ಷೃ, ವಾದ - ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಅವರು ಬಸವರಾಜ್ ಅಲ್ಲಪ್ಪ ಪಡಿವಾಳರ್ ಅವರ ಮೇಲಿನ ಅಪರಾಧ ಸಾಬೀತಾಗಿರುವುದನ್ನು ಪ್ರಕಟಿಸಿ, ಅಪರಾಧಿಗೆ ಅತ್ಯಾಚಾರ ಮಾಡಿದ ಅಪರಾಧಕ್ಕೆ 10 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ಮತ್ತು 15 ಸಾವಿರ ರೂ. ದಂಡ ವಿಧಿಸಿದ್ದಾರ. ದಂಡದ ಹಣವನ್ನು ನೊಂದ ಬಾಲಕಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದಲೂ ಹೆಚ್ಚಿನ ಪರಿಹಾರ ನೀಡಬೇಕು ಎಂದು ನಿರ್ದೇಶನ ನೀಡಿದೆ. ನೊಂದ ಬಾಲಕಿಯು ಅಪ್ರಾಪ್ತೆ ಎನ್ನುವುದು ಪುರಾವೆಯಾಗದಿರುವುದರಿಂದ ಪೋಕ್ಸೋ ಕಾಯ್ದೆಯಡಿ ಶಿಕ್ಷೆ ವಿಧಿಸಿಲ್ಲ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಬದರೀನಾಥ್ ನಾಯರಿ ಅವರು ಸಾಕ್ಷಿದಾರರನ್ನು ವಿಚಾರಿಸಿ ವಾದ ಮಂಡಿಸಿದ್ದರು.