

ಹುಬ್ಬಳ್ಳಿ: ಆನ್ಲೈನ್ ಕ್ಯಾಸಿನೋ ಆಪ್ ಮೂಲಕ ಕೋಟ್ಯಂತರ ರೂ. ಗೆದ್ದಿದ್ದ ನಗರದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ 7 ಆರೋಪಿತರನ್ನು ಹುಬ್ಬಳ್ಳಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಇಲ್ಲಿನ ಮಂಟೂರ ರಸ್ತೆಯ ನಿವಾಸಿ, ಇಂಜಿನಿಯರಿಂಗ್ ವಿದ್ಯಾರ್ಥಿ ಗರೀಬ್ ನವಾಜ್ ಅಪಹರಣಕ್ಕೀಡಾಗಿದ್ದ ಯುವಕ. ಆರೀಫ್ ದಾಸ್ತಿಕೊಪ್ಪ, ಅಬ್ದುಲ್ ಹಾಗೂ ಇತರರು ಬಂಧಿತ ಆರೋಪಿಗಳು.
ಗರೀಬ್ ನವಾಜ್ ತಾಳಿಕೋಟೆ ಮೂಲದ ಬಿಲ್ವರ್ ಎಂಬ ಯುವಕನ ಮೂಲಕ ಆನ್ಲೈನ್ ಕ್ಯಾಸಿನೋ ಆಪ್ ಡೌನ್ಲೋಡ್ ಮಾಡಿಕೊಂಡಿದ್ದ. 15 ದಿನ ಈ ಬಗ್ಗೆ ಅಧ್ಯಯನ ಮಾಡಿದ್ದ. ಕೇವಲ 1 ಸಾವಿರ ರೂ.ನಿಂದ ಆಟ ಆರಂಭಿಸಿ ಬರೋಬ್ಬರಿ 12 ಕೋಟಿ ರೂ. ಗಳಿಸಿದ್ದ. ಈ ಹಣ ಬಿಡಿಸಿಕೊಳ್ಳಲು ಸ್ನೇಹಿತ ಅಬ್ದುಲ್ನ ಹೆಸರಲ್ಲಿದ್ದ ಖಾತೆಗೆ ಹಣ ವರ್ಗಾಯಿಸಿ ಬಿಡಿಸಿಕೊಂಡಿದ್ದ.
ಇದೇ ಸಂದರ್ಭದಲ್ಲಿ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ ಅಬ್ದುಲ್ ನಿತ್ಯ ಸಾವಿರಾರು ರೂ. ಬಡ್ಡಿ, ಚಕ್ರಬಡ್ಡಿ ಕಟ್ಟುತ್ತಿದ್ದ. ಆರೀಫ್ ಎಂಬಾತ ಅಬ್ದುಲ್ ಬಳಿಯೇ ಸಾಲ ಕೇಳಿದ್ದ. ನನ್ನ ಬಳಿ ಹಣ ಇಲ್ಲ. ಗರೀಬ್ ಕ್ಯಾಸಿನೋದಲ್ಲಿ ಕೋಟ್ಯಂತರ ರೂ. ಗೆದ್ದಿದ್ದಾನೆ. ಅವನನ್ನು ಅಪಹರಿಸಿದರೆ ಹಣ ಸಿಗುತ್ತದೆ ಎಂದು ಅಬ್ದುಲ್ ಹೊಂಚು ಹಾಕುತ್ತಾನೆ. ಏಳು ಸ್ನೇಹಿತರು ಸೇರಿ ಆ. 6ರಂದು ಸಂಜೆ ಅಬ್ದುಲ್ ಸಹಾಯದಿಂದ ಟವೇರಾದಲ್ಲಿ ಅಪಹರಿಸುತ್ತಾರೆ. ಗರೀಬ್ ತಂದೆಗೆ ಕರೆ ಮಾಡಿ ಕೋಟಿ ರೂ.ಗೆ ಬೇಡಿಕೆ ಇಡುತ್ತಾರೆ. ಕೂಡಲೆ ಎಚ್ಚೆತ್ತ ಗರೀಬ್ ತಂದೆ ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಅಳ್ನಾವರ, ಕಿತ್ತೂರು ಸುತ್ತಮುತ್ತ ಓಡಾಡಿಕೊಂಡು ಡಾಬಾ ಒಂದರಲ್ಲಿ ಊಟಕ್ಕೆ ತೆರಳಿದ್ದಾಗ ಪೊಲೀಸರು ಆರೋಪಿಗಳನ್ನು ಬಂಧಿಸಿ ಕರೆತಂದು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಭರ್ಜರಿ ಕಾರ್ಯಾಚರಣೆ: ಎಸಿಪಿ ಆರ್.ಕೆ. ಪಾಟೀಲ ನೇತೃತ್ವದಲ್ಲಿ ಬೆಂಡಿಗೇರಿ ಇನ್ಸ್ಪೆಕ್ಟರ್ ಶ್ಯಾಮರಾಜ ಸಜ್ಜನ್, ಕೇಶ್ವಾಪುರ ಠಾಣೆ ಇನ್ಸ್ಪೆಕ್ಟರ್ ಜಗದೀಶ ಹಂಚಿನಾಳ, ಗೋಕುಲ ಠಾಣೆಯ ಜೆ.ಎಂ. ಕಾಲಿಮಿರ್ಚಿ ಹಾಗೂ ಉಪನಗರ ಠಾಣೆಯ ರವಿಚಂದ್ರ ಡಿ.ಬಿ. ನೇತೃತ್ವದಲ್ಲಿ ನಾಲ್ಕು ತಂಡ ರಚಿಸಲಾಗಿತ್ತು. ಈ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಆಯುಕ್ತ ಲಾಭೂರಾಮ ತಿಳಿಸಿದ್ದಾರೆ.