

ಪುರುಷೋತ್ತಮ ಪೆರ್ಲ ಕಾಸರಗೋಡು
ಉತ್ತಮ ತಳಿಯ ಹಸು ಖರೀದಿಸುವವರನ್ನು ಚಿತ್ತಾರಿ ಹಾಲು ಉತ್ಪಾದಕ ಸಂಘದ ಕರುಗಳ ಉದ್ಯಾನ(ಕಿಡಾರಿ ಪಾರ್ಕ್) ಕೈಬೀಸಿ ಕರೆಯುತ್ತಿದೆ. ಜಿಲ್ಲೆಯ ಹಾಲು ಉತ್ಪಾದನಾ ವಲಯಕ್ಕೆ ಹೊಸ ಹುರುಪು ನೀಡುವ ನಿಟ್ಟಿನಲ್ಲಿ ಚಿತ್ತಾರಿ ಹಾಲು ಉತ್ಪಾದಕರ ಸಂಘದ ಸ್ವಾಮ್ಯದಲ್ಲಿರುವ ಕಿಡಾರಿ ಪಾರ್ಕನ್ನು ಅಭಿವೃದ್ಧಿಪಡಿಸಲಾಗಿದೆ.
ಕೃಷಿಕರು, ಹಾಲು ಉತ್ಪಾದಕರು ಮಾತ್ರವಲ್ಲ ಈ ವಲಯಕ್ಕೆ ನೂತನವಾಗಿ ಪದಾರ್ಪಣೆ ಮಾಡಲು ಆಸಕ್ತರಾದವರಿಗೆ ಮಧ್ಯವರ್ತಿಗಳಿಲ್ಲದೆ ಗುಣಮಟ್ಟದ ದನಗಳ ಖರೀದಿಗೆ ಈ ಸಂಸ್ಥೆ ನೆರವಾಗುತ್ತಿದೆ. 2018-19ರಲ್ಲಿ ಹಾಲು ಅಭಿವೃದ್ಧಿ ಇಲಾಖೆ ರಾಜ್ಯಕ್ಕೆ ಮಂಜೂರು ಮಾಡಿರುವ ಎರಡು ಪಾರ್ಕ್‌ಗಳಲ್ಲಿ ಚಿತ್ತಾರಿಯ ಕರುಗಳ ಉದ್ಯಾನವೂ ಒಂದು. ಇನ್ನೊಂದು ತಿರುವನಂತಪುರದಲ್ಲಿದೆ.
ಏಳರಿಂದ 15 ತಿಂಗಳು ಪ್ರಾಯದ ಕರುಗಳನ್ನು ಖರೀದಿಸಿ ಬೆಳೆಸಲಾಗುತ್ತದೆ. ಬೆಳೆದು ಕರುವಿಗೆ ಜನ್ಮ ನೀಡಿದ ನಂತರ ಜತೆಯಾಗಿ ಹಸು ಮತ್ತು ಕರುವನ್ನು ಮಾರಾಟ ಮಾಡುವುದು ಯೋಜನೆಯ ಉದ್ದೇಶ. ಡಿಸೆಂಬರ್‌ನಲ್ಲಿ ಚಟುವಟಿಕೆ ಆರಂಭಿಸಿರುವ ಈ ಉದ್ಯಾನದಲ್ಲಿ 66 ಹಸು ಮಾರಾಟವಾಗಿದ್ದು, ಸದ್ಯ 20ಕ್ಕೂ ಹೆಚ್ಚು ಮಾರಾಟಕ್ಕೆ ಸಿದ್ಧವಾಗಿವೆ.
ದರ ನಿಗದಿ ಹೇಗೆ?: ಜಿಲ್ಲೆಯ ಅನೇಕ ಹಾಲು ಉತ್ಪಾದಕರಿಗೆ ಮತ್ತು ಚೀಮೇನಿ ತೆರೆದ ಕಾರಾಗೃಹಕ್ಕೆ ಇಲ್ಲಿನ ದನಗಳು ಮಾರಾಟವಾಗಿವೆ. ತಮಿಳುನಾಡಿನ ಕೃಷ್ಣಗಿರಿ, ಕರ್ನಾಟಕದ ಚಿಂತಾಮಣಿ ಪ್ರದೇಶಗಳಿಂದ ಮೊದಲ ಹಂತದಲ್ಲಿ ಈ ಉದ್ಯಾನಕ್ಕೆ ಕರುಗಳನ್ನು ಖರೀದಿಸಿ ತರಲಾಗಿತ್ತು. ಬೆಳೆದ ಹಸುವಿಗೆ 45 ಸಾವಿರದಿಂದ 75 ಸಾವಿರ ರೂ. ಬೆಲೆಯಿದೆ. ರೋಗ ಪ್ರತಿರೋಧ, ಹಾಲು ಉತ್ಪಾದನೆ ಸಾಮರ್ಥ್ಯ ಇತ್ಯಾದಿಗಳ ಹಿನ್ನೆಲೆಯಲ್ಲಿ ದರ ನಿಗದಿಯಾಗುತ್ತದೆ. ಮಧ್ಯವರ್ತಿಗಳಿಲ್ಲದೆ ನೇರವಾಗಿ ಆಸಕ್ತರು ಇಲ್ಲಿ ಹಸು ಖರೀದಿಸಬಹುದು. ಹಸುಗಳಿಗೆ ವಿಮೆ ಸೌಲಭ್ಯ ಒದಗಿಸಿ ಮಾರಾಟ ಮಾಡಲಾಗುತ್ತದೆ. ಖರೀದಿ ಅವಧಿಯಲ್ಲಿ ಹೆಲ್ತ್ ಆ್ಯಂಡ್ ವ್ಯಾಕ್ಸಿನೇಷನ್ ಸರ್ಟಿಫಿಕೆಟ್ ಖಚಿತಪಡಿಸಲಾಗುತ್ತದೆ.
ಹಾಲು ಅಭಿವೃದ್ಧಿ ಸೊಸೈಟಿ ಮಾರ್ಗದರ್ಶನದಲ್ಲಿ ಈ ಕೇಂದ್ರ ಕಾರ್ಯಾಚರಿಸುತ್ತಿದ್ದು, ಪಾರ್ಕನ್ನು ಮತ್ತಷ್ಟು ವಿಸ್ತರಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಶಾಸಕರ ನಿಧಿಯಿಂದ 25 ಲಕ್ಷ ರೂ. ಮೊತ್ತದಲ್ಲಿ ಬೃಹತ್ ಕಟ್ಟಡ ನಿರ್ಮಿಸಲಾಗುತ್ತಿದ್ದು, ಹಸುಗಳ ಸಂಖ್ಯೆಯನ್ನು 100ಕ್ಕೇರಿಸುವ ಯೋಜನೆಯಿದೆ. ಸ್ವಂತವಾಗಿ ಎರಡು ಎಕರೆ ಹಾಗೂ ಗುತ್ತಿಗೆ ಪಡೆದ ಒಂದೂವರೆ ಎಕರೆ ವಿಸ್ತೀರ್ಣದಲ್ಲಿ ಮೇವಿನ ಹುಲ್ಲು ಬೆಳೆಯಲಾಗುತ್ತಿದೆ.
- ಪ್ರದೀಶ್, ಕಾರ್ಯದರ್ಶಿ, ಚಿತ್ತಾರಿ ಹಾಲು ಉತ್ಪಾದಕರ ಸಂಘ