ಭೂಸ್ವಾಧೀನ ಕೈಬಿಡುವ ನಿರೀಕ್ಷೆ!

kiadb
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ ರೈತರಿಗೆ ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲಿದೆ ಎಂಬ ನಿರೀಕ್ಷೆ ಹೆಚ್ಚಿದೆ. ಹೊಸ ವರ್ಷದ ಆರಂಭದಲ್ಲಿಯೇ ಸಿಎಂ ಸಿದ್ದರಾಮಯ್ಯ ರೈತ ಹೋರಾಟಗಾರರ ಒತ್ತಡಕ್ಕೆ ಸಮ್ಮತಿಯ ನಿಶಾನೆ ತೋರಿಸಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಇತ್ತೀಚಿಗೆ ಚನ್ನರಾಯಪಟ್ಟಣ ರೈತ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಭೂ ಸ್ವಾಧೀನ ಕೈಬಿಡುವಂತೆ ಮನವಿ ಮಾಡಿತ್ತು. ಈ ವೇಳೆ ಸಿಎಂ ಸರ್ಕಾರ ರೈತರ ಪರವಾಗಿದೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಈ ಭರವಸೆ ರೈತ ಹೋರಾಟಗಾರರಲ್ಲಿ ಹೊಸ ನಿರೀಕ್ಷೆ ಗರಿಗೆದರಿದ್ದು ಜನವರಿಯಲ್ಲಿ ಹೋರಾಟಕ್ಕೆ ಜಯ ಸಿಗಲಿದೆ ಎಂಬ ಕಾತುರದಲ್ಲಿದ್ದಾರೆ.

ಡಿಸಿ ಕಚೇರಿ ಮುತ್ತಿಗೆ: ಸಾವಿರ ದಿನ ಪೂರೈಸಿರುವ ಭೂಸ್ವಾಧೀನ ವಿರೋಧಿ ರೈತ ಹೋರಾಟಗಾರರ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳುವ ಮುನ್ಸೂಚನೆ ನೀಡಿದೆ. ಕೆಲ ದಿನಗಳ ಹಿಂದೆಯೇ ರೈತ ಮುಖಂಡರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಿ ಅನಿರ್ದಿಷ್ಟಾವಧಿ ಧರಣಿ ನಡೆಸುವ ಸಂಬಂಧ ತೀರ್ಮಾನ ಕೈಗೊಂಡಿತ್ತು. ಪೊಲೀಸರ ಬಂಧನಕ್ಕೂ ಬೆಚ್ಚದೆ ನಮ್ಮ ಹಕ್ಕಿನ ಪರವಾಗಿ ಹೋರಾಟಕ್ಕೆ ಮುನ್ನುಗ್ಗುವ ಸೂಚನೆ ರವಾನಿಸಿತ್ತು. ಏತನ್ಮಧ್ಯೆ ಜಿಲ್ಲಾಧಿಕಾರಿಯಾದಿಯಾಗಿ ಉಸ್ತುವಾರಿ ಸಚಿವರು ಹೋರಾಟಗಾರರ ಮನವೊಲಿಸಿದ ಪರಿಣಾಮ ತಾತ್ಕಾಲಿವಾಗಿ ಡಿಸಿ ಕಚೇರಿ ಮುತ್ತಿಗೆಯನ್ನು ಹಿಂಪಡೆಯಲಾಗಿತ್ತು. ಅದಾದ ಬಳಿಕ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ರೈತರ ನಿಯೋಗ ಸಭೆಯಲ್ಲಿ ಹಕ್ಕೊತ್ತಾಯಗಳನ್ನು ಮಂಡಿಸಿತ್ತು. ಜನವರಿ ಬಳಿಕವೂ ಸರ್ಕಾರದಿಂದ ರೈತ ಪರವಾದ ಸೂಚನೆ ಬರದಿದ್ದರೆ ಹಿಂದಿನ ಹೋರಾಟದ ರೂಪುರೇಷೆಗಳಿಗೆ ಉಗ್ರ ಸ್ವರೂಪ ಕೊಡಲು ಮುಖಂಡರು ಸಿದ್ದತೆ ನಡೆಸಿದ್ದಾರೆ.

 ಅಷ್ಟೂ ಭೂಮಿಯನ್ನು ಕೈಬಿಡಬೇಕು: ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೆಐಎಡಿಬಿ ವತಿಯಿಂದ 13 ಹಳ್ಳಿಗಳ ವ್ಯಾಪ್ತಿಯಲ್ಲಿ 1777 ಎಕರೆ ಜಮೀನು ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದ್ದು,

ಈಗಾಗಲೇ ಮೂರು ಬಾರಿ ಭೂಸ್ವಾಧೀನ ಪ್ರಕ್ರಿಯೆ ನಡೆಸಿಸಲಾಗಿದೆ, ಇದರ ಬೆನ್ನಲ್ಲೆ ಹೊಸದಾಗಿ ಭೂಸ್ವಾಧೀನ ನಡೆಸಬಾರದು. ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂದು ರೈತ ಮುಖಂಡರು ಮನವಿ ಮಾಡಿದ್ದರು. ಇದರಲ್ಲಿ ಗೋಕರೆ ಬಚ್ಚಹಳ್ಳಿ ಹಾಗೂ ಯಾಡ್ಯಾಳ ಸೇರಿ 438 ಎಕರೆ ಭೂಸ್ವಾಧೀನಕ್ಕೆ ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು ಅಂತಿಮ ಅಧಿಸೂಚನೆ ಆಗಿರುವ ಜಮೀನು ವಾಪಾಸು ಪಡೆಯಲು ಸಾಧ್ಯವಿಲ್ಲ ಎಂಬ ಮಾಹಿತಿ ಹೊರಬಿದ್ದಿತ್ತು. ಇದಕ್ಕೆ ಒಪ್ಪದ ರೈತ ಮುಖಂಡರು ಭೂಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಅಷ್ಟೂ ಜಮೀನನಿನ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಒಂದು ರೀತಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಎಷ್ಟು ಭೂಮಿ ಕೈಬಿಡಲಾಗುವುದು, ಎಷ್ಟು ಭೂಮಿಯನ್ನು ಕೈಬಿಡಲು ಸಾಧ್ಯವಿಲ್ಲ ಎಂಬ ಬಗ್ಗೆ ಸ್ಪಷ್ಟತೆ ಇಲ್ಲದಂತಾಗಿದೆ. ಸರ್ಕಾರ ರೈತರ ಪರವಾಗಿದ್ದು ಈ ವಿಷಯದ ಕುರಿತು ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಅದರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಡಬೇಕು ಇಲ್ಲವಾದರೆ ಹೋರಾಟ ಹಿಂಪಡೆಯುವ ಮಾತೇ ಇಲ್ಲ ಎಂಬುದು ಹೋರಾಟಗಾರರ ಬಿಗಿಪಟ್ಟಾಗಿದೆ.

ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟಗಾರರ ರೈತ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಸಿಎಂ ಅವರಿಂದಲೂ ಸಕಾರಾತ್ಮಕವಾದ ಭರವಸೆ ಬಂದಿದೆ. ನೂತನ ವರ್ಷದ ಆರಂಭದಲ್ಲಿ ಈ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಸಿಎಂ ಮಾತಿನ ಮೇಲೆ ಭರವಸೆ ಇದೆ. ಜನವರಿಯಲ್ಲಿ ನಮ್ಮ ಹೋರಾಟಕ್ಕೆ ಪ್ರತಿಲ ಸಿಗದಿದ್ದರೆ ಹೋರಾಟದ ರೂಪುರೇಷೆ ಉಗ್ರ ಸ್ವರೂಪ ಪಡೆಯಲಿದೆ.

ಕಾರಹಳ್ಳಿ ಶ್ರೀನಿವಾಸ್, ಭೂಸ್ವಾಧೀನ ವಿರೋಧಿ ಹೋರಾಟದ ರೈತ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net