

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಒಳಗಿರುವ ವಾಹನ ನಿಲುಗಡೆ ಸ್ಥಳದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇಕಾಬಿಟ್ಟಿಯಾಗಿ ವಿಲೇವಾರಿ ಮಾಡುತ್ತಿರುವುದರಿಂದ ಚಂದದ ರಸ್ತೆ ಬದಿ ಅಶುಚಿ ದೃಶ್ಯಗಳು ಕಾಣುವಂತಾಗಿದೆ.
ರಾ.ಹೆ. 44ರ ಹೆದ್ದಾರಿಯಿಂದ ನೇರವಾಗಿ ಏರ್‌ಪೋರ್ಟ್ ತಲುಪಲು ಜೋಡಿ ರಸ್ತೆ ನಿರ್ಮಿಸಲಾಗಿದೆ. ಈ ರಸ್ತೆಯು ಹೆದ್ದಾರಿ ರೀತಿ ಇದ್ದು, ವಿಮಾನನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಮಾರ್ಗ ಮಧ್ಯೆ ಪಿ-7ರ ಟ್ಯಾಕ್ಸಿ ವಾಹನಗಳ ಪಾರ್ಕಿಂಗ್‌ಗೆ ಪ್ರತ್ಯೇಕ ಸ್ಥಳವನ್ನು ನಿಗದಿ ಮಾಡಲಾಗಿದೆ. ಈ ವಿಶಾಲ ಜಾಗದಲ್ಲಿ ಒಮ್ಮೆಲೆ ಸಾವಿರಕ್ಕೂ ಹೆಚ್ಚು ಟ್ಯಾಕ್ಸಿಗಳನ್ನು ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ನಿತ್ಯ ಟ್ಯಾಕ್ಸಿಗಳನ್ನು ಚಲಾಯಿಸಿ ವಿಶ್ರಾಂತಿ ಹಾಗೂ ನಿಲುಗಡೆ ಮಾಡಲು ಬರವು ಚಾಲಕರು ತಿಂಡಿ, ಊಟ ಮಾಡಿದ ಬಳಿಕ ಕುಡಿಯುವ ನೀರಿನ ಖಾಲಿ ಬಾಟಲ್‌ಗಳನ್ನು ರಸ್ತೆ ಬದಿಯಲ್ಲೇ ಎಸೆದು ಹೋಗುತ್ತಾರೆ.
ರಸ್ತೆ ಬದಿ ಫುಟ್‌ಪಾತ್, ಬುಲೇವಾರ್ಡ್ ರೀತಿ ಗಿಡಗಳನ್ನು ಬೆಳೆಸಲಾಗಿದೆ. ಇದರ ಪಕ್ಕದಲೇ ಖಾಲಿ ಜಾಗವಿದ್ದು, ಪ್ಲಾಸ್ಟಿಕ್ ತ್ಯಾಜ್ಯ ರಾಶಿ ಬಿದ್ದಿದೆ. ಜತೆಗೆ ಮದ್ಯದ ಬಾಟಲಿಗಳು, ವಾಹನಗಳ ಹಳೆಯ ಟಯರ್ ಇತ್ಯಾದಿ ವಸ್ತುಗಳನ್ನು ಬಿಸಾಡಲಾಗಿದೆ. ನಿಲುಗಡೆ ಸ್ಥಳದಲ್ಲಿ ಸಮರ್ಪಕವಾದ ಡಸ್ಟ್‌ಬಿನ್ ವ್ಯವಸ್ಥೆ ಇಲ್ಲದ ಕಾರಣ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆದು ಹೋಗುವ ಚಾಳಿಯನ್ನು ಚಾಲಕರು ಬೆಳೆಸಿಕೊಂಡಿದ್ದಾರೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
ನಿಲುಗಡೆ ಸ್ಥಳದ ಪ್ರವೇಶ ದ್ವಾರದಲ್ಲಿ ಶೌಚಾಲಯವನ್ನು ನಿರ್ಮಿಸಲಾಗಿದೆ. ಇನ್ನೊಂದು ತುದಿಯಿಂದ ಇಲ್ಲಿಗೆ ಬರಲು ಸಮಯ ಹಿಡಿಯುವುದರಿಂದ ಕೆಲ ಚಾಲಕರು ನಿಲುಗಡೆ ಕಾಂಪೌಂಡ್ ಬಳಿಯೇ ಮೂತ್ರ ವಿಸರ್ಜಿಸಿ ಹೋಗುತ್ತಿದ್ದಾರೆ. ಇದರಿಂದ ಆ ಸ್ಥಳವು ಗಬ್ಬುನಾರುತ್ತಿದ್ದು, ವಿಮಾನನಿಲ್ದಾಣದ ಸಿಬ್ಬಂದಿ ಸ್ವಚ್ಚ ಮಾಡುತ್ತಿಲ್ಲ. ಟ್ಯಾಕ್ಸಿ ಚಾಲಕರಿಗೆ ಸ್ವಚ್ಚತೆ ಕುರಿತು ಅರಿವು ಮೂಡಿಸದ ಕಾರಣ ಈ ಪ್ರದೇಶವು ತ್ಯಾಜ್ಯ ಗುಂಡಿಯಂತಾಗಿದೆ.