

ಮಂಗಳೂರು : ನಗರದ ಕಪಿತಾನಿಯೋ ಪಿಯು ಕಾಲೇಜಿನ 25ನೇ ವರ್ಷಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಖೋ ಖೋ ಅಸೋಸಿಯೇಷನ್ , ದಕ್ಷಿಣ ಕನ್ನಡ ಜಿಲ್ಲಾ ಅಸೋಸಿಯೇಷನ್ ಹಾಗೂ ಕಪಿತಾನಿಯೋ ಖೋ ಖೋ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ರಾಜ್ಯ ಮಟ್ಟದ ಖೋ ಖೋ ಪಂದ್ಯಾಟ ನ.26ರಂದು ನಗರದ ಪಂಪ್‌ವೆಲ್‌ನ ಕಪಿತಾನಿಯೋ ಶಾಲಾ ಮೈದಾನದಲ್ಲಿ ನಡೆಯಲಿದೆ.
ನ.26ರಂದು ಬೆಳಗ್ಗೆ 8.30ಕ್ಕೆ ಮಂಗಳೂರು ಮಹಾ ನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಪಂದ್ಯಾಟ ಉದ್ಘಾಟಿಸಲಿದ್ದಾರೆ. ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಕಪಿತಾನಿಯೋ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿ ಭ.ಸೆಲಿನ್ ಜೇನ್ ಮೆಂಡೊನ್ಸಾ ಅಧ್ಯಕ್ಷತೆ ವಹಿಸಲಿದ್ದಾರೆ. ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ .ಆರ್.ಟ್ರೋಫಿ ಅನಾವರಣ ಮಾಡಲಿದ್ದಾರೆ ಎಂದು ಕಪಿತಾನಿಯೋ ಖೋ ಖೋ ಸ್ಪೋರ್ಟ್ಸ್ ಕ್ಲಬ್‌ನ ಗೌರವ ಸಲಹೆಗಾರ ವಿನ್ಸೆಂಟ್ ಲೋಬೊ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದ.ಕ.ಜಿಲ್ಲೆಯಲ್ಲಿ ಮೊದಲ ಮ್ಯಾಟ್ ಮಾದರಿ ಖೋ ಖೋ ಪಂದ್ಯಾಟ ನಡೆಯಲಿದ್ದು, ಆಹ್ವಾನಿತ ತಂಡಗಳು ಭಾಗವಹಿಸಲಿವೆ. ಇದೇ ಸಂದರ್ಭ ಫುಡ್ ಫೆಸ್ಟ್ ಆಯೋಜಿಸಲಾಗಿದೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಡಿ.ವೇದವ್ಯಾಸ ಕಾಮತ್ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಕಪಿತಾನಿಯೋ ಖೋ ಖೋ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕೌಶಿಕ್ ಗರೋಡಿ, ಉಪಾಧ್ಯಕ್ಷ ಗಣೇಶ್, ಕಾರ್ಯದರ್ಶಿ ಆದಿ, ಕೋಶಾಧಿಕಾರಿ ಯಶ್ವಿತ್, ಜತೆ ಕೋಶಾಧಿಕಾರಿ ಕೌಶಿಕ್, ದೈಹಿಕ ಶಿಕ್ಷಣ ಶಿಕ್ಷಕ ರೆಕ್ಸನ್ ಕ್ರಾಸ್ತಾ ಉಪಸ್ಥಿತರಿದ್ದರು.