

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಸಾರ್ವಜನಿಕ ಕೆಲಸಗಳಿಗೆ ಸರ್ಕಾರಿ ಕಚೇರಿಗಳಿಗೆ ಅನಗತ್ಯವಾಗಿ ಅಲೆಯುವುದನ್ನು ತಪ್ಪಿಸಲು ಸಾರ್ವಜನಿಕ ಸಂಪರ್ಕ ಸಭೆ ವಿನೂತನ ಪ್ರಯೋಗವಾಗಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಸಂಯುಕ್ತಾಶ್ರಯದಲ್ಲಿ ದೇವನಹಳ್ಳಿಯ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಮಾತನಾಡಿದರು. ಭೂಮಾಪನ ಇಲಾಖೆ ಹೊರತುಪಡಿಸಿ ಇನ್ನಿತರ ಇಲಾಖೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ತಿಂಗಳೊಳಗೆ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು ಎಂದರು. ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಅರ್ಜಿಗಳಿಗೆ ಹಿಂಬರಹ ಕೊಡಲು ಸೂಚಿಸಿದ್ದೇನೆ ಎಂದರು. ಎಸಿ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಬೇಕು ಎಂದು ಡಿಸಿ ಹಾಗೂ ಎಸಿಗೆ ಸೂಚನೆ ನೀಡಿದರು. ನಿಮ್ಮ ಸಮಸ್ಯೆಗಳೇನಿದ್ದರೂ ಸಂಬಂಧಪಟ್ಟ ಅಧಿಕಾರಿಗಳ ಹಂತದಲ್ಲಿಯೇ ಬಗೆಹರಿಸಿಕೊಳ್ಳಬೇಕು ಎಸಿ, ಡಿಸಿ ಅಥವಾ ತಹಸೀಲ್ದಾರ್ ಹಂತದವರೆಗೆ ಪ್ರಕರಣ ಹೋಗಬಾರದು ಎಂದರು.
ಪ್ರತೀ ಸೋಮವಾರ ಅಧಿಕಾರಿಗಳು ಸಂಜೆ 4 ರಿಂದ 5 ರವರೆಗೆ ಸಾರ್ವಜನಿಕರ ಸಮಸ್ಯೆ ಆಲಿಸಲು ಸಮಯ ಮೀಸಲಿಡಬೇಕು ಜನರನ್ನು ಸತಾಯಿಸದೆ ಕೆಲಸ ಮಾಡಿಕೊಡಬೇಕು ಎಂದು ತಾಕೀತು ಮಾಡಿದರು.
ರಸ್ತೆ ಅಭಿವೃದ್ಧಿಗೆ ನಿಶಾನೆ:
ಅ.2 ರಿಂದ ಪ್ರತಿ ತಾಲೂಕಿನ ಅತ್ಯಂತ ಕಳಪೆ ರಸ್ತೆಗಳನ್ನು ಅಭಿವೃದ್ಧಿ ಮಾಡುವ ಕೆಲಸಕ್ಕೆ ಸರ್ಕಾರ ಹಸಿರು ನಿಶಾನೆ ನೀಡಲಿದೆ ಎಂದರು. ಅರಣ್ಯದಂಚಿನ ಮಂಜೂರಾತಿ ಜಮೀನಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸುವವರೆಗೂ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನಕ್ಕೆ ಕೈ ಹಾಕಬೇಡಿ ಎಂದು ಸೂಚನೆ ನೀಡಿದ್ದೇನೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ಇನ್ನು 6 ತಿಂಗಳಲ್ಲಿ ದೇವನಹಳ್ಳಿಯನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದರು. ಬಹುತೇಕ ಕಡೆ ಸ್ಮಶಾನ ಜಮೀನು ಒತ್ತುವರಿಯಾಗಿದೆ ಇದನ್ನು ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ಕಂದಾಯ ಇಲಾಖೆಯ ಸಮಸ್ಯೆಗಳು:
ಸಭೆಯಲ್ಲಿ ಕಂದಾಯ ಇಲಾಖೆ ಮತ್ತು ಆರ್‌ಡಿಪಿಆರ್ ಸಂಬಂಧಿಸಿದ ಕುಂದುಕೊರತೆಗಳು ಹೆಚ್ಚು ಕೇಳಿಬಂದವು. ನಿವೇಶ ಬೇಕು, ಸ್ಮಶಾನಕ್ಕೆ ಜಾಗಬೇಕು, ರಸ್ತೆ ಡಾಂಬರು ಆಗಬೇಕು, ಗಂಗಾಕಲ್ಯಾಣ ಯೋಜನೆಯಡಿ ಕೊಳವೆಬಾವಿ ಬೇಕು ಸೇರಿ ಮತ್ತಿತರ ಬೇಡಿಕೆಗಳು ವ್ಯಕ್ತವಾದವು.
ಸಾರ್ವಜನಿಕರಿಂದ ಮನವಿ:
ತಾಲೂಕಿನಲ್ಲಿ ಅವೈಜ್ಞಾನಿಕ ರೈಲ್ವೆ ಅಂಡರಪಾಸ್‌ನಿಂದ ಮಳೆಗಾದಲ್ಲಿ ನೀರು ನಿಂತು ಸಂಪರ್ಕವೇ ಕಡಿತಗೊಳ್ಳಲಿದೆ ನಮಗೆ ಅಂಡರ್‌ಪಾಸ್ ಬೇಡ ಮೇಲ್ಸುತೆವೆ ನಿರ್ಮಾಣ ಮಾಡಿಕೊಡಿ ಎಂದು ಬುಳ್ಳಹಳ್ಳಿ ರಾಜಪ್ಪ ಎಂಬುವರು ಮನವಿ ಮಾಡಿದರು. ವಿಜಯಪುರ ಮಂಡಿಬೆಲೆ ರಸ್ತೆಗಳು ಹಾಳಾಗಿದ್ದು ರಸ್ತೆ ದುರಸ್ಥಿ ಮಾಡಿಸಿಕೊಡಿ ವಿಜಯಪುರದಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ಜನ ಸಣ್ಣ ಸಣ್ಣ ಬಾಡಿಗೆ ಮನೆಗಳಲ್ಲಿ ವಾಸಮಾಡುತ್ತಿದ್ದಾರೆ ನಿವೇಶನಗಳನ್ನು ಮಂಜೂರು ಮಾಡಿಸಿಕೊಡಿ ಎಂದು ವಿಜಯಪುರದ ರವಿಕಲಾ ಎಂಬುವರು ಬೇಡಿಕೆ ಇಟ್ಟರು. ದೇವನಹಳ್ಳಿ ತಾಲೂಕು ಆಡಳಿತ ಸೌಧದಲ್ಲಿ ಶೌಚಗೃಹ ಸಮಸ್ಯೆ ಇದೆ, ಮೊದಲ ಮಹಡಿಯಲ್ಲಿರುವ ಸಬ್‌ರಿಜಿಸ್ಟ್ರಾರ್ ಕಚೇರಿಗೆ ಹತ್ತಲು ಅಂಗವಿಕಲರು, ವೃದ್ಧರು ಪರದಾಡಬೇಕಿದೆ ಅಲ್ಲಿ ಲ್‌ಟಿ ವ್ಯವಸ್ಥೆ ಬೇಕಿದೆ, ಐತಿಹಾಸಿಕ ದೇವನಹಳ್ಳಿಗೆ ದೇವನಗರ ಎಂದು ಮರುನಾಮಕರಣ ಮಾಡಿ ಎಂದು ಕೆಲ ಸಾರ್ವಜನಿಕರು ಮನವಿ ಸಲ್ಲಿಸಿದರು.
276 ಅರ್ಜಿ ಸ್ವೀಕಾರ: