

ಹನುಮಸಾಗರ: ತಮಿಳುನಾಡು ಕನ್ಯಾಕುಮಾರಿಯಲ್ಲಿ ಆಯೋಜಿಸಿದ್ದ 21ನೇ ರಾಷ್ಟ್ರ ಮಟ್ಟದ ಸಿಲಂಬಮ್ (ದೊಣ್ಣೆ ವರಸೆ) ಕ್ರೀಡಾಕೂಟದಲ್ಲಿ ವಿವಿಧ ಪದಕಗಳನ್ನು ಜಯಿಸಿ ಪಟ್ಟಣಕ್ಕೆ ಆಗಮಿಸಿದ ಕ್ರೀಡಾಪಟುಗಳನ್ನು ಶನಿವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ರಾಜ್ಯ ಸಿಲಂಬಮ್ ಸಂಸ್ಥೆ ಕಾರ್ಯದರ್ಶಿ ಮಹಾಂತೇಶ ಬೀಳಗಿ ಅವರಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದ ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಮಾತನಾಡಿ, ಸಿಲಂಬಮ್ ಕ್ರೀಡಾಪಟುಗಳಿಂದ ದೇಶದಾದ್ಯಂತ ನಮ್ಮ ಊರಿನ ಕೀರ್ತಿ ಹೆಚ್ಚುತ್ತಿದೆ. ಕ್ರೀಡಾ ಪಟುಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಾಧನೆ ಮಾಡುವಂತಾಗಲಿ ಎಂದರು.
ರಾಜ್ಯ ಸಿಲಂಬಮ್ ಸಂಸ್ಥೆಯ ಕಾರ್ಯದರ್ಶಿ ಮಹಾಂತೇಶ ಬೀಳಗಿ ಮಾತನಾಡಿ, ಆಲ್ ಇಂಡಿಯಾ ಸಿಲಂಬಮ್ ೇಡರೇಷನ್ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು. ಜಮ್ಮು ಮತ್ತು ಕಾಶ್ಮೀರ, ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ ಸೇರಿ ದೇಶದ ವಿವಿಧ ರಾಜ್ಯಗಳ ಕ್ರೀಡಾಪಟುಗಳು ಭಾಗವಹಿಸಿದ್ದರು. ಇದರಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ತಂಡಗಳು ಜಂಟಿಯಾಗಿ ರನ್ನರ್ ಅಪ್ ಸ್ಥಾನ ಪಡೆದುಕೊಂಡಿವೆ. ಕರ್ನಾಟಕ ಕ್ರೀಡಾಪಟುಗಳು ಒಂದು ಚಿನ್ನ, 10 ಬೆಳ್ಳಿ, 6 ಕಂಚಿನ ಪದಕಗಳನ್ನು ಪಡೆದು 92 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಮಹಿಳೆಯರ ಸೀನಿಯರ್ ವಿಭಾಗದಲ್ಲಿ ಕೆ.ಏಂಜಲ್ ಸ್ಟಿಕ್ ಫೈಟ್‌ನಲ್ಲಿ 1 ಚಿನ್ನ, ಸ್ಪೇರ್ ಸ್ಟಿಕ್ನಲ್ಲಿ 1 ಕಂಚು, ಅನುಷಾ ಎಮ್. 2 ಬೆಳ್ಳಿ, ಪುರುಷರ ವಿಭಾಗದಲ್ಲಿ ವಿರಾಜ್ ಗುಡಿಕೋಟಿ 2 ಬೆಳ್ಳಿ, ಸಬ್ ಜೂನಿಯರ್ ವಿಭಾಗದಲ್ಲಿ ಪವನ ಗೌಡ ನಾಡಗೌಡರ 1 ಬೆಳ್ಳಿ, ಪ್ರೀತಮ ಬಿಂಗಿ ಸ್ಟಿಕ್ ಫೈಟ್ನಲ್ಲಿ 1 ಬೆಳ್ಳಿ, ಸ್ಪೇರ್ ಸ್ಟಿಕ್ ರುಟೇಷನಲ್ಲಿ 1 ಕಂಚು, ದಿಗಂತ 1 ಬೆಳ್ಳಿ, 1 ಕಂಚು, ಪ್ರಜ್ವಲ್ 1 ಬೆಳ್ಳಿ, ಮಿನಿ ಸಬ್ ಜೂನಿಯರ್ ವಿಭಾಗದಲ್ಲಿ ಚಿನ್ಮಯ ಬಿರಾದಾರ 1 ಬೆಳ್ಳಿ, ಅಮಿತ ರಾಠೋಡ 2 ಕಂಚು ಪದಕ ಪಡೆದುಕೊಂಡಿದ್ದಾರೆ. ಇಲ್ಲಿ ಪದಕ ಪಡೆದ ಕ್ರೀಡಾಪಟುಗಳು ಖೇಲೋ ಇಂಡಿಯಾದ ಸ್ಕೂಲ್ ಗೇಮ್ ನಲ್ಲಿ ಭಾಗವಹಿಸಲಿದ್ದಾರೆ ಎಂದರು.
ಗ್ರಾಪಂ ಸದಸ್ಯ ಬಸವರಾಜ ದ್ಯಾವಣ್ಣನವರ, ಮುಖಂಡರಾದ ಕರಿಸಿದ್ದಪ್ಪ ಕುಷ್ಟಗಿ ಇತರರಿದ್ದರು.