ಬಡಾವಣೆಗೆ ಮೂಲ ಸೌಲಭ್ಯ ಕಲ್ಪಿಸಲಿ: ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎಸ್.ಹರೀಶ್ ಒತ್ತಾಯ

KHB Maharajanagara Residents Welfare Development Association Press Conference Mandya
Published on

ಮಂಡ್ಯ: ನಗರದ ಕೆಎಚ್‌ಬಿ ಮಹಾರಾಜನಗರ ಬಡಾವಣೆಯಲ್ಲಿ ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯವಿಲ್ಲದೆ ನಿವಾಸಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಕೆಎಚ್‌ಬಿ ಮಹಾರಾಜನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎಸ್.ಹರೀಶ್ ತಿಳಿಸಿದರು.

20 ವರ್ಷದ ಹಿಂದೆ ನಿರ್ಮಿಸಲಾದ ಬಡಾವಣೆಯನ್ನು ಕರ್ನಾಟಕ ಗೃಹನಿರ್ಮಾಣ ಮಂಡಳಿಯು 2019ರಲ್ಲಿ ನಗರಸಭೆಗೆ ಹಸ್ತಾಂತರಿಸಿದೆ. ಮಾತ್ರವಲ್ಲದೆ ಇದರ ನಿರ್ವಹಣೆಗೆ 5.50 ಕೋಟಿ ರೂ ನೀಡಿತ್ತು. ಆದರೆ, ನಗರಸಭೆ 4 ಕೋಟಿ ರೂ ವೆಚ್ಚದಲ್ಲಿ ಕೆಲವು ರಸ್ತೆ ಕಾಮಗಾರಿ ನಡೆಸಿದ್ದು ಬಿಟ್ಟರೆ ಮೂಲ ಸೌಕರ್ಯ ಒದಗಿಸಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಬಡಾವಣೆಯಲ್ಲಿ 500ಕ್ಕೂ ಹೆಚ್ಚು ಕುಟುಂಬ ವಾಸವಿದ್ದು, ಕುಡಿಯಲು ಕಾವೇರಿ ನೀರಿನ ಸಂಪರ್ಕ ಸೇರಿದಂತೆ ಮೂಲ ಸೌಕರ್ಯದಿಂದ ವಂಚಿತವಾಗಿವೆ. ಕಾವೇರಿ ನೀರು ಪಡೆಯಲು 3.50 ಕೋಟಿ ರೂ ಅನುದಾನಕ್ಕೆ ನಗರಸಭೆಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಜಲಮಂಡಳಿ ಹೇಳುತ್ತಿದ್ದು, ಈ ಬಗ್ಗೆ ನಗರಸಭೆ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಮೇ 17ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಖಾಲಿ ಬಿಂದಿಗೆಗಳೊಂದಿಗೆ ಪ್ರತಿಭಟನೆ ನಡೆಸಲಾಗುವುದು. ಮಾತ್ರವಲ್ಲದೆ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದರು.

ಸಂಘದ ಗೌರವಾಧ್ಯಕ್ಷ ಸಿ.ಶ್ರೀಕಾಂತ್, ಉಪಾಧ್ಯಕ್ಷ ಪುಟ್ಟಯ್ಯ, ಕಾರ್ಯದರ್ಶಿ ಕೆ.ಅಶೋಕ, ಸದಸ್ಯರಾದ ಬಿ.ಜೆ.ಸೋಮಶೇಖರ್, ಡಿ.ಪಿ.ಧನಂಜಯ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net