

ಕುಶಾಲನಗರ:
ಶ್ರೀ ಸುಬ್ರಹ್ಮಣ್ಯ ಷಷ್ಠಿ ಹಿನ್ನೆಲೆಯಲ್ಲಿ ಕುಶಾಲನಗರ ವ್ಯಾಪ್ತಿಯ ದೇವಾಲಯಗಳಲ್ಲಿ ಶನಿವಾರ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಅನ್ನದಾನ ಮತ್ತಿತರ ಕಾರ್ಯಕ್ರಮಗಳು ನಡೆದವು. ಭಕ್ತರು ಶ್ರದ್ಧಾ-ಭಕ್ತಿಯಿಂದ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದು ಪುನೀತರಾದರು.
ಇಲ್ಲಿನ ಕೆಹೆಚ್‌ಬಿ ಕಾಲೋನಿಯಲ್ಲಿರುವ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಸ್ಥಾನದಲ್ಲಿ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಸ್ಥಾನ ಸೇವಾ ಮತ್ತು ಕಲಾ ಟ್ರಸ್ಟ್ ವತಿಯಿಂದ ಷಷ್ಠಿ ಉತ್ಸವ ಆಚರಿಸಲಾಯಿತು. ಇಲ್ಲಿ ಶುಕ್ರವಾರ ಷಷ್ಠಿ ಪಂಚಮಿ ಪೂಜೆಯೊಂದಿಗೆ ಪೂಜಾ ವಿದಿವಿಧಾನಗಳು ಆರಂಭವಾಗಿದ್ದವು. ಅಂದು ಗಣಹೋಮ, ನವಗ್ರಹ ಪೂಜೆಗಳನ್ನು ನಡೆಸಲಾಯಿತು. ಕಳಶಾಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗದ ನಂತರ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಶ್ರೀ ಸ್ವಾಮಿಯ ಪಲ್ಲಕ್ಕಿ ಉತ್ಸವ ಆಯೋಜಿಸಲಾಗಿತ್ತು.
ಶನಿವಾರ ಬೆಳಗ್ಗೆ 5 ಗಂಟೆಯಿAದಲೇ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ ಮತ್ತು ಷಷ್ಠಿ ಪೂಜೆಗಳು ಆರಂಭವಾದವು. ಬೆಳಗ್ಗೆ 6 ಗಂಟೆಗೆ ಪುಷ್ಪಾಲಂಕಾರ, 8 ಗಂಟೆಗೆ ವಸ್ತಾçಲಂಕಾರ, 11 ಗಂಟೆಗೆ ವಸ್ತಾçಲಂಕಾರ ಆರಂಭವಾಗಿ 12.30 ಗಂಟೆಗೆ ಮಹಾಮಂಗಳಾರತಿ ನಡೆಯಿತು. ನಂತರ ಭಕ್ತರಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು.
ಸಂಜೆ 6 ಗಂಟೆ ನಂತರ ಅಲಂಕೃತ ಮಂಟಪದಲ್ಲಿ ಮಂಗಳವಾದ್ಯ ಮತ್ತು ಕಲಾತಂಡದೊAದಿಗೆ ಶ್ರೀ ಸ್ವಾಮಿಯ ಉತ್ಸವ ಮೆರವಣಿಗೆ ನಡೆಯಿತು. ಹಾರಂಗಿ ಕಾಲೋನಿ, ಜನತಾಕಾಲೋನಿ, ಮುಳ್ಳುಸೋಗೆ, ರಥಬೀದಿ, ಬೈಚನಹಳ್ಳಿ ಮುಖಾಂತರ ಸಾಗಿ ಸ್ವಸ್ಥಾನಕ್ಕೆ ಹಿಂತಿರುಗಲಾಯಿತು.
ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಸ್ಥಾನ ಸೇವಾ ಮತ್ತು ಕಲಾ ಟ್ರಸ್ಟ್ ಅಧ್ಯಕ್ಷ ಡಿ.ಆರ್. ಚಿಕ್ಕೇಗೌಡ, ಗೌರವಾಧ್ಯಕ್ಷ ಎಂ.ಎಸ್. ಮೊಗಣ್ಣೇಗೌಡ, ಎಂ.ಕೆ. ಹನುಮರಾಜ್, ಉಪಾಧ್ಯಕ್ಷ ಬಿ.ವಿ. ನಂಜುAಡಸ್ವಾಮಿ, ಬಿ.ಎ. ಗಂಗಾಧರ್, ಪ್ರಧಾನ ಕಾರ್ಯದರ್ಶಿ ಹೆಚ್.ಎಂ. ಮಧುಸೂದನ್ ಮತ್ತಿತರರು ಈ ಸಂದರ್ಭ ಇದ್ದರು.