

ಹರಪನಹಳ್ಳಿ: ಉದ್ಯೋಗ ಖಾತ್ರಿ ಕೂಲಿ ಹಾಗೂ ಟ್ರಾೃಕ್ಟರ್ ಬಾಡಿಗೆ ನೀಡದಿರುವುದನ್ನು ಖಂಡಿಸಿ ತಾಲೂಕಿನ ಕುಂಚೂರು ಗ್ರಾಪಂ ವ್ಯಾಪ್ತಿ ಅರಸನಾಳು ಗ್ರಾಮದ 400ಕ್ಕೂ ಹೆಚ್ಚು ಕಾರ್ಮಿಕರು ಕೆರೆ ಹೂಳೆತ್ತುವ ಕಾಮಗಾರಿ ಅರ್ಧಕ್ಕೆ ಬಿಟ್ಟು ಶನಿವಾರ 15 ಟ್ರಾೃಕ್ಟರ್‌ಗಳಲ್ಲಿ ತಾಪಂ ಕಚೇರಿಗೆ ಆಗಮಿಸಿ ದಿಢೀರ್ ಪ್ರತಿಭಟನೆ ನಡೆಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಎರಡು ವಾರಗಳಿಂದ ಕೆರೆ ಹೂಳೆತ್ತುವ ಕೆಲಸದಲ್ಲಿ ತೊಡಗಿದ್ದೇವೆ. ಆದರೆ, ಈವರೆಗೆ ಕೂಲಿ ಪಾವತಿಸಿಲ್ಲ. ಅಲ್ಲದೆ ಕೆಲಸ ಪೂರ್ತಿ ಮಾಡಿಸಿಕೊಂಡು ಕಡಿಮೆ ಎಂಬಿ ಬರೆಯಲಾಗುತ್ತದೆ. ಎರಡು ವರ್ಷದಿಂದ ಟ್ರಾೃಕ್ಟರ್ ಬಾಡಿಗೆ ಕೊಟ್ಟಿಲ್ಲ. ಸರ್ಕಾರದ ನಿಯಮದಂತೆ 275 ರೂ. ಬದಲಿಗೆ ಕಡಿಮೆ ಕೂಲಿ ನೀಡಲಾಗುತ್ತದೆ. ಇಂಜಿನಿಯರ್ ಉದ್ದೇಶಪೂರ್ವಕವಾಗಿ ಕಡಿಮೆ ಎಂಬಿ ಬರೆಯುತ್ತಾರೆ. ಕೆಲಸ ನಡೆಯುವ ಸ್ಥಳದಲ್ಲಿ ಮೂಲಸೌಕರ್ಯ ಒದಗಿಸಿಲ್ಲ ಎಂದು ಕಾರ್ಮಿಕರಾದ ಅರಸನಾಳು ನಾಗರಾಜ, ಹೊನ್ನಮ್ಮ ಇತರರು ಆಕ್ರೋಶ ವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಾಪಂ ಇಒ ಬಿ.ಎಲ್.ಈಶ್ವರ್ ಪ್ರಸಾದ್, ಕೆಲಸಕ್ಕೆ ತಕ್ಕಂತೆ ಕೂಲಿ ಕೊಡಬೇಕು. ಇಂಜಿನಿಯರ್ ತಾಂತ್ರಿಕ ಅನುಮೋದನೆ ಪ್ರಕಾರ ಕೂಲಿ ಪಾವತಿಸಿದ್ದಾರೆ. ಸಮಸ್ಯೆ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಟ್ರಾೃಕ್ಟರ್‌ಗಳಲ್ಲಿ ಬಂದ ಕಾರ್ಮಿಕರು ಪ್ರತಿಭಟನೆಗೂ ಮುನ್ನ ತಂದಿದ್ದ ಬುತ್ತಿಯನ್ನು ಬಿಚ್ಚಿ ಊಟ ಮಾಡಿದರು. ಗ್ರಾಮೀಣ ಕೂಲಿಕಾರರ ಸಂಘಟನೆ ಜಿಲ್ಲಾ ಸಂಚಾಲಕ ಕೋಗಳಿ ಮಲ್ಲೇಶ್, ತಾಲೂಕು ಸಂಚಾಲಕರಾದ ಭಾಗ್ಯಮ್ಮ, ಶ್ರುತಿ, ಅನಿಲ್‌ನಾಯ್ಕ, ಮಲ್ಲೇಶ್ ನಾಯ್ಕ, ರಾಜಾನಾಯ್ಕ ಹಾಗೂ ಕೂಲಿ ಕಾರ್ಮಿಕರು ಭಾಗವಹಿಸಿದ್ದರು.