ಬ್ಯಾಡಗಿಯಲ್ಲಿ ಶ್ರೀಗಂಧ ಮರ ಕತ್ತರಿಸುವ ಖತರ್ನಾಕ್ ಕಳ್ಳರು

sandal wood tree
Published on

ಬ್ಯಾಡಗಿ: ಪಟ್ಟಣದ ಮೇಲಗಿರಿ ಪ್ಲಾಟ್ ಮನೆಯ ಬಳಿ ಬೆಳೆದಿದ್ದ ಶ್ರೀಗಂಧದ ಮರವನ್ನು ಕಳ್ಳರು ರಾತ್ರೋರಾತ್ರಿ ಕತ್ತರಿಸಿ ಉಳಿದ ಭಾಗವನ್ನು ಅಲ್ಲಿಯೇ ಎಸೆದು ಪರಾರಿಯಾದ ಘಟನೆ ಬುಧವಾರ ತಡರಾತ್ರಿ ಜರುಗಿದೆ. ಈ ಕುರಿತು ಪೊಲೀಸ್ ಠಾಣೆ, ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಪ್ರಕರಣ ದಾಖಲಿಸದಿರುವುದು ಸೋಜಿಗವಾಗಿದೆ.

ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಆಗಾಗ ಇಂತಹ ಘಟನೆಗಳು ಜರುಗಿದರೂ ಪ್ರಕರಣ ದಾಖಲಾಗುತ್ತಿಲ್ಲ. ಅರಣ್ಯ ಇಲಾಖೆ ಕಾಯ್ದೆಯಂತೆ ಖುದ್ದಾಗಿ ಮರದ ಮಾಲೀಕರು ಅಥವಾ ಜಾಗದ ಮಾಲೀಕರೇ ಪೊಲೀಸ್ ಠಾಣೆ ಇಲ್ಲವೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಅವರು ನೀಡಿದ ದೂರು ಆಧರಿಸಿ, ಕ್ರಮ ಕೈಗೊಳ್ಳುವುದಾಗಿ ಅರಣ್ಯಾಧಿಕಾರಿಗಳು ತಿಳಿತ್ತಾರೆ. ಆದರೆ ಸಾರ್ವಜನಿಕರು ದೂರು ಸಲ್ಲಿಸಿದ ಬಳಿಕ ಅಧಿಕಾರಿಗಳು ತನಿಖೆಗೆ ಕಚೇರಿಗೆ ಕರೆಸುವುದು, ಪದೇಪದೆ ಮಾಹಿತಿ ಕೇಳುತ್ತಾರೆ ಎಂಬ ಕಾರಣದಿಂದ ಯಾರೂ ದೂರು ನೀಡಲು ಮುಂದಾಗುತ್ತಿಲ್ಲ. ಕಳವು ನಡೆದ ಜಾಗದ ಮನೆಯ ಸುತ್ತಲಿನ ಸಿಸಿ ಕ್ಯಾಮರಾ ಮೂಲಕ ಪತ್ತೆಹಚ್ಚುವ ಮೂಲಕ ಮರಗಳ್ಳರಿಗೆ ಕಡಿವಾಣ ಹಾಕಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿದ ಉಪವಲಯ ಅರಣ್ಯಾಧಿಕಾರಿ ಚಮನಲಿ ಕಾಲೆಖಾನ, ಶ್ರೀಗಂಧ ಮರ ಕಡಿದ ಸ್ಥಳಕ್ಕೆ ಸಿಬ್ಬಂದಿ ಭೇಟಿ ನೀಡಿದೆ. 8-10 ವರ್ಷದ ಮರವಾಗಿದ್ದು, ಕಳವಾಗಿರುವ ಗಂಧದ ತೂಕ, ಮೌಲ್ಯ ತಿಳಿದುಬಂದಿಲ್ಲ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ತನಿಖೆ ಮುಂದುವರಿಸಿದ್ದೇವೆ. ಎರಡು ದಿನಗಳಿಂದ ರಾತ್ರಿ ಹೊತ್ತಲ್ಲಿ ಮರಗಳ್ಳರ ಪತ್ತೆ ಕಾರ್ಯಾಚರಣೆಗೆ ಜಾಲ ಬೀಸಲಾಗಿದೆ. ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net