ಸಕಾಲದಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಿ: ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಆಕ್ರೋಶ

Mlc Dinesh Gooligowda)
Published on

ಮಂಡ್ಯ: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಖರೀದಿ ಕೇಂದ್ರ ಪ್ರಾರಂಭಿಸುವುದರ ಜತೆಗೆ ರೈತರಿಗೆ ಬೆಳೆ ತೆಗೆದುಕೊಳ್ಳಬೇಕು ಎಂದು ರಾಜ್ಯಸರ್ಕಾರ, ಅಧಿಕಾರಿಗಳನ್ನು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, 2022-23ನೇ ಸಾಲಿನಲ್ಲಿ ಖರೀದಿ ಪ್ರಕ್ರಿಯೆಯಲ್ಲಿ ಭಾರಿ ಕುಸಿತ ಕಂಡಿದ್ದು, ಇದಕ್ಕೆ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷೃವೇ ಕಾರಣ. ಕಳೆದ ಸಾಲಿನಲ್ಲಿ 20 ಲಕ್ಷ ಕ್ವಿಂಟಾಲ್ ಭತ್ತ ಹಾಗೂ 5 ಲಕ್ಷ ಕ್ವಿಂಟಾಲ್ ರಾಗಿಯನ್ನು ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ಖರೀದಿ ಮಾಡಲಾಗಿತ್ತು. ಆದರೆ, ಈ ಸಾಲಿನಲ್ಲಿ 79 ಸಾವಿರ ಕ್ವಿಂಟಾಲ್ ಭತ್ತ ಖರೀದಿಯಾಗಿದ್ದರೆ, 3.29 ಲಕ್ಷ ಕ್ವಿಂಟಾಲ್ ರಾಗಿ ಖರೀದಿಯಾಗಿದೆ. ಹೀಗಾಗಿ ಮುಂದಿನ ಸಲ ಸೂಕ್ತ ಸಮಯದಲ್ಲಿ ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ತೆರೆದು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದಿದ್ದಾರೆ.

ಈಗಾಗಲೇ ಬೆಲೆ ಕುಸಿತ ಹಾಗೂ ರಾಸಾಯನಿಕ ಗೊಬ್ಬರಗಳ, ಕೀಟನಾಶಕಗಳ ಬೆಲೆ ಏರಿಕೆಯಾಗಿದೆ. ಜತೆಗೆ ಉತ್ಪಾದನಾ ವೆಚ್ಚ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ರೈತನ ಬದುಕು ದುಸ್ತರವಾಗಿದ್ದಲ್ಲದೆ, ಆತ್ಯಹತ್ಯೆ ಹಾದಿ ಹಿಡಿಯುವಂತಾಗುತ್ತಿದೆ. ಕೃಷಿ ವಲಯ ಸಂಕಷ್ಟಕ್ಕೆ ಸಿಲುಕಿ ನಷ್ಟದ ದಾರಿ ಹಿಡಿದಿದೆ. ಕೃಷಿ ಕಾರ್ಮಿಕರ ಕೊರತೆಯು ಕೂಡ ತೀವ್ರವಾಗಿ ರೈತರನ್ನು ಕಾಡುತ್ತಿದೆ. ಈ ಮಧ್ಯೆ ಸರ್ಕಾರ ಹಾಗೂ ಸರ್ಕಾರದ ಆದೇಶವನ್ನು ಅನುಷ್ಠಾನಕ್ಕೆ ತರುವ ಅಧಿಕಾರಿಗಳು ಇದನ್ನು ಪಾಲಿಸದೇ ಇದ್ದರೆ ಏನು ಗತಿ?. ಆದ್ದರಿಂದ ಸೂಕ್ತ ಸಮಯದಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರ ಸ್ಥಾಪನೆ ಹೇಗೆ ಮುಖ್ಯವೋ ಅದರ ನಿಷ್ಪಕ್ಷಪಾತ ನಿರ್ವಹಣೆಯೂ ಅಷ್ಟೇ ಮುಖ್ಯವಾಗುತ್ತದೆ ಎಂಬುದು ಎಲ್ಲರ ಗಮನದಲ್ಲಿರಬೇಕು ಎಂದು ಆಗ್ರಹಿಸಿದರು.

ಇಳುವರಿ ಬರುವ ಇಲ್ಲವೇ ಕಟಾವು ಮಾಡುವ ಸಂದರ್ಭದಲ್ಲಿ ನಿಗದಿತ ವೇಳೆಯಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ತೆರೆಯದೇ ಇರುವುದು ನಷ್ಟಕ್ಕೆ ಬಹುಮುಖ್ಯ ಕಾರಣ. ಏಕೆಂದರೆ ರೈತರು ಮೊದಲೇ ಸಾಲ-ಸೋಲ ಮಾಡಿ ಬೆಳೆ ಬೆಳೆದಿರುತ್ತಾನೆ. ಆತನಿಗೆ ಕಟಾವು ಆದ ತಕ್ಷಣವೇ ಒಂದಷ್ಟು ಸಾಲ ತೀರಿಸುವ ಸೇರಿದಂತೆ ಇನ್ನಿತರ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವ ಅನಿರ್ವಾಯತೆ ಎದುರಾಗಿರುತ್ತದೆ. ಆದರೆ, ಕಟಾವು ಆದ ಸಂದರ್ಭದಲ್ಲಿ ಸರ್ಕಾರ ಇಲ್ಲವೇ ಅಧಿಕಾರಿಗಳು ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ತೆರೆಯದೇ ಹೋದಲ್ಲಿ ರೈತರು ಅನಿವಾರ್ಯವಾಗಿ ಹೊರಗಡೆ ಮಾರುಕಟ್ಟೆಯಲ್ಲಿ ಬೆಳೆಯನ್ನು ಮಾರಾಟ ಮಾಡಬೇಕಾಗುತ್ತದೆ. ದಲ್ಲಾಳಿಗಳು ಕೇಳುವ ದರಕ್ಕೆ ಅಂದರೆ ಕಡಿಮೆ ದರಕ್ಕೆ ಮಾರಾಟ ಮಾಡಿ ನಷ್ಟವನ್ನು ಅನುಭವಿಸುವ ಸ್ಥಿತಿ ಬಂದೊದಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net