

ಚಿಕ್ಕಮಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ತನ್ನ ಅಳಿಯನನ್ನು ಗೆಲ್ಲಿಸಿಕೊಳ್ಳುವ ಕಾರಣಕ್ಕಾಗಿ ಎಮೋಷನಲ್ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಇದೇ ಕಾರಣಕ್ಕೆ ಭಾಷಣದ ವೇಳೆ ಭಾವುಕರಾಗುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ದೂರಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಅಳಿಯ ಲೋಕಸಭಾ ಚುನಾವಣೆಯಲ್ಲಿ ಸೋಲುತ್ತಾನೆ ಎಂಬ ಇಂಟಲಿಜೆನ್ಸಿ ರಿಪೋರ್ಟ್ ಬಂದಿದೆ. ಹೀಗಾಗಿ ಏನಾದರೂ ಮಾಡಿ ಅಳಿಯನನ್ನು ಗೆಲ್ಲಿಸಬೇಕು ಎಂಬ ಹತಾಶೆಯಲ್ಲಿ ಖರ್ಗೆ ಸಾಹೇಬರು ಇದ್ದಾರೆ ಎಂದು ಟಾಂಗ್ ನೀಡಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಅನುಕಂಪ ಗಿಟ್ಟಿಸಿಕೊಳ್ಳುವ ತಂತ್ರವಾಗಿ ಭಾವುಕರಾಗುತ್ತಿದ್ದಾರೆ. ಅಳಿಯನನ್ನು ಏನಾದರೂ ಮಾಡಿ ಗೆಲ್ಲಿಸಿಕೊಳ್ಳಬೇಕು ಎಂಬ ತಂತ್ರವನ್ನು ಬಿಟ್ಟರೆ ಬೇರೇನು ಅವರ ಬಳಿ ಕಾಣಿಸುತ್ತಿಲ್ಲ. ದೇಶದ ಹಿತದ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆಯೇ ಎಂದು ಪ್ರಶ್ನಿಸಿದ ಅವರು ಎಐಸಿಸಿ ಅಧ್ಯಕ್ಷರ ಮಾತಿನಲ್ಲಿ ದೇಶದ ಯಾವ ಹಿತವೂ ವ್ಯಕ್ತವಾಗಿಲ್ಲ ಎಂದು ದೂರಿದರು.
ಕಲಬುರ್ಗಿಯಲ್ಲಿ ಜನ ಮಾತ್ರವಲ್ಲ ಕಾಂಗ್ರೆಸ್ಸಿಗರೇ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಆಡಳಿತ ವೈಖರಿಗೆ ಬೇಸತ್ತಿದ್ದಾರೆ. ಖರ್ಗೆ ಅವರ ಅಳಿಯನನ್ನು ಗೆಲ್ಲಿಸಿದರೆ ನಮ್ಮ ತಲೆಯ ಮೇಲೆ ಮಸಾಲೆ ಅರೆಯುತ್ತಾರೆ ಎನ್ನುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ತಿಳಿದಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಸೋಲಬೇಕು ಎಂಬ ಚಿಂತನೆಯಲ್ಲಿ ಕಾಂಗ್ರೆಸ್ಸಿಗರೇ ಇದ್ದಾರೆ. ಗೀ ಹತಾಶೆಯಿಂದಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಭಾವುಕರಾಗಿದ್ದಾರೆ ಅಷ್ಟೇ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಮಗ ಹಾಗೂ ಅಳಿಯನಿಗೆ ತೋರಿಸುವ ಕಾಳಜಿಯನ್ನು ಯಾವತ್ತಾದರೂ ಕಾಂಗ್ರೆಸ್ ಕಾರ್ಯಕರ್ತರ ಬಗ್ಗೆ ತೋರಿಸಿದ್ದಾರೆಯೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ರೈತರ ನೆರವಿಗೆ ಬರಬೇಕು ಎನ್ನುವ ಆಸಕ್ತಿಯೇ ಇಲ್ಲ. ಆದರೆ ರೈತರ ವಿಷಯದಲ್ಲಿ ರಾಜಕಾರಣ ಮಾಡಬೇಕು ಎಂಬುದರಲ್ಲೇ ಆಸಕ್ತಿ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಈಗ ಬಿಡುಗಡೆ ಮಾಡಿರುವ ಬರ ಪರಿಹಾರ ನಿಧಿಯನ್ನಾದರೂ ಪ್ರಾಮಾಣಿಕವಾಗಿ ರೈತರಿಗೆ ತಲುಪಿಸುವ ಕೆಲಸ ಮಾಡಿ ಎಂದು ಸರ್ಕಾರಕ್ಕೆ ಮಾಜಿ ಸಚಿವ ಸಿ.ಟಿ.ರವಿ ಸಲಹೆ ನೀಡಿದರು.
ರಾಜ್ಯದಲ್ಲಿ 600ಕ್ಕೂ ಹೆಚ್ಚು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಸಾಮಾನ್ಯ ಸಂಗತಿಯಲ್ಲ. ಆದರೆ ರಾಜ್ಯ ಸರ್ಕಾರದ ಸಚಿವರೊಬ್ಬರು ಹಣಕ್ಕಾಗಿ ರೈಚರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳುತ್ತಾರೆ. ಇದು ರೈತರ ಬಗ್ಗೆ ಸರ್ಕಾರಕ್ಕೆ ಇರುವ ಕಾಳಜಿಯನ್ನು ತೋರಿಸುತ್ತದೆ. ರೈತ ಸಂಕಷ್ಟಕ್ಕೆ ಒಳಗಾಗಿ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಯೇ ಹೊರತು ಹಣಕ್ಕಾಗಿ ಯಾರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಈ ಕನಿಷ್ಠ ಜ್ಞಾನವು ಸಚಿವರಿಗಿಲ್ಲ ಎಂದು ದೂರಿದರು.
ಮುಖ್ಯಮಂತ್ರಿ ಸೇರಿದಂತೆ ಸಚಿವರು ಹಾಗೂ ಶಾಸಕರೆಲ್ಲರೂ ಕೇವಲ ರಾಜಕಾರಣ ಮಾಡುವುದರಲ್ಲಿಯೇ ನಿರತರಾಗಿದ್ದಾರೆ. ರೈತರ ಸಂಕಷ್ಟ ಪರಿಹಾರಕ್ಕೆ ಸಂಬಂಧಪಟ್ಟಂತೆ ಯಾವುದೇ ಪ್ರಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಇದನ್ನು ಇಲ್ಲಿಗೆ ನಿಲ್ಲಿಸಿ ಇನ್ನು ಮುಂದೆಯಾದರೂ ಪ್ರಾಮಾಣಿಕವಾಗಿ ರೈತರ ಪರವಾಗಿ ಕೆಲಸ ಮಾಡಿ ಎಂದು ಹೇಳಿದರು.
ಮಹಾರಾಷ್ಟ್ರ ಸರ್ಕಾರದ ಮಾದರಿಯಲ್ಲಿಯೇ ಕರ್ನಾಟಕದಲ್ಲಿಯೂ ಕಿಸಾನ್ ಸಮ್ಮಾನ್ ಯೋಜನೆಗೆ ಚಾಲನೆ ನೀಡಬೇಕು. ಕೇಂದ್ರದ 6 ಸಾವಿರ ಜೊತೆಗೆ ರಾಜ್ಯ ಸರ್ಕಾರದ 6 ಸಾವಿರ ರೂಪಾಯಿ ಸೇರಿಸಿ 12 ಸಾವಿರ ರೂಪಾಯಿ ಹಣವನ್ನು ರೈತರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಹಾಲು ಉತ್ಪಾದಕರ ಪ್ರೋತ್ಸಾಹ ಧನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಸಗಣಿ ಬಾಚಿ ಕಷ್ಟಪಡುವ ಮಹಿಳೆಗೆ ಸಬ್ಸಿಡಿ ಕೊಡದೇ ಇರುವುದು ದುರದೃಷ್ಟಕರ. ಕೂಡಲೇ ಹಾಲಿನ ಸಬ್ಸಿಡಿ ದರವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಬಾಕ್ಸ್…..
ಓಲೈಕೆಯ ರಾಜನೀತಿಯಿಂದಾಗಿ ಭಯೋತ್ಪಾದನೆ
ಓಲೈಕೆಯ ರಾಜ ನೀತಿಯಿಂದಾಗಿ ದೇಶದಲ್ಲಿ ಭಯೋತ್ಪಾದನೆ ಬೆಳೆದು ಸೈನಿಕರು ಬಲಿಯಾಗಬೇಕಾಯಿತು ಎಂದು ಮಾಜಿ ಸಚಿವ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
ಭಯೋತ್ಪಾದನೆಗೆ ಸಂಬಂಧಪಟ್ಟಂತೆ ಬಿಕೆ ಹರಿಪ್ರಸಾದ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಭಯೋತ್ಪಾದನೆ ಬೆಳೆಯಲು ಫಲಕೊಟ್ಟವರು ಯಾರು ಎಂದು ಪ್ರಶ್ನಿಸಿದರು.
ಭಯೋತ್ಪಾದಕರಿಗೆ ಕಾಂಗ್ರೆಸ್ಸಿಗರು ಬಿರಿಯಾನಿ ತಿನ್ಸಿ ಭಾಯ್, ಬ್ರದರ್ಸ್ ಎಂದು ಕರೆದರೆ ಭಯೋತ್ಪಾದನೆ ಹೇಗೆ ನಿಯಂತ್ರಣಕ್ಕೆ ಬರಲು ಸಾಧ್ಯ. ಭಯೋತ್ಪಾದನೆ ನಿಯಂತ್ರಣಕ್ಕೆ ಬೇಕಾಗಿರುವುದು ಸರ್ಜಿಕಲ್ ಸ್ಟ್ರೈಕ್. ಭಯೋತ್ಪಾದನೆ ಮಟ್ಟ ಹಾಕಲು ಬೇಕಾಗಿರುವುದು ಜೀರೋ ಟಾಲರೆನ್ಸ್. ಆದರೆ ಕಾಂಗ್ರೆಸ್ ಜೀರೋ ಟಾಲರೆನ್ಸ್ ಗೆ ಎಲ್ಲಿ ಅವಕಾಶ ಮಾಡಿಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.