ಹೆಂಡತಿ ಬೇಕೆಂದು ಎಂಟು ಗಂಟೆ ತೆಂಗಿನ ಮರ ಏರಿ ಕುಳಿತ ಗಂಡ

161220 Khanahosalli Husband on Coconut Tree
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ದಾಸೋಬನಹಳ್ಳಿ ಗೊಲ್ಲರಹಟ್ಟಿಯ ದೊಡ್ಡಪ್ಪ ತೆಂಗಿನ ಮರವೇರಿ ಕುಳಿತಿರುವುದು.
Published on

ಕಾನಹೊಸಹಳ್ಳಿ: ಇರೋದು ಇಬ್ಬರು ಹೆಂಡಿರು! ಆದರೆ, ಒಬ್ಬಳೂ ಜತೆಗೆ ಸಂಸಾರ ಮಾಡುತ್ತಿಲ್ಲ. ಇದರಿಂದ ಮನನೊಂದು, ಎರಡನೇ ಹೆಂಡತಿಯಿಂದಾದ ಮೂವರು ಮಕ್ಕಳ ಪೋಷಣೆಗೆ ಬೇಸತ್ತ ಪತಿರಾಯನೊಬ್ಬ, ತನಗೆ ಹೆಂಡ್ತಿ ಬೇಕು ಎಂದು ಹಠ ಹಿಡಿದು, ತೆಂಗಿನ ಮರವೇರಿ ಕುಳಿತು ಗ್ರಾಮಸ್ಥರು, ಪೊಲೀಸರು, ಬಂಧುಗಳನ್ನು ಫಜೀತಿಗೆ ಈಡುಮಾಡಿದ ಘಟನೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ದಾಸೋಬನಹಳ್ಳಿ ಗೊಲ್ಲರಹಟ್ಟಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

40ರ ಹರೆಯದ ದೊಡ್ಡಪ್ಪ ತೆಂಗಿನ ಮರ ಏರಿ ಕುಳಿತ ವ್ಯಕ್ತಿ. ಸಂಜೆ 4ಗಂಟೆ ಮರ ಏರಿದ ಈತನನ್ನು ಕೆಳಗಿಳಿಸಲು ಬರೋಬ್ಬರಿ 8 ತಾಸು ಸಮಯ ಹಿಡಿಯಿತು. ಗ್ರಾಮಸ್ಥರು, ಪೊಲೀಸರು, ಬಂಧುಗಳು ಇದಕ್ಕಾಗಿ ಹೆಣಗಾಡಬೇಕಾಯಿತು. ಮೊದಲು ಗ್ರಾಮಸ್ಥರು ಮರದಿಂದ ಇಳಿಯಲು ಹೇಳಿದರೆ ಕೇಳಲಿಲ್ಲ. ನಂತರ ಪೊಲೀಸರು ಸ್ಥಳಕ್ಕೆ ಬಂದು ಮನವೊಲಿಸಲು ಯತ್ನಿಸಿದರೂ ಕೇಳಲಿಲ್ಲ. ಚುನಾವಣಾ ಕರ್ತವ್ಯದಲ್ಲಿದ್ದ ಪಿಎಸ್‌ಐ ಎಚ್.ನಾಗರಾಜ್ ಸ್ಥಳಕ್ಕೆ ಧಾವಿಸಿ, ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರೂ ಕೇಳಲಿಲ್ಲ. ಆತನದು ಒಂದೇ ಪಟ್ಟು. ‘ಮೊದಲು ನನ್ನ ಹೆಂಡತಿಯರನ್ನು ಕರೆಸಿ’ ಎಂಬುದು. ಬೇರೆ ವಿಧಿಯಿಲ್ಲದೇ ದೊಡ್ಡಪ್ಪನ ಮೊದಲ ಹೆಂಡತಿಯನ್ನು ಕರೆಸಿ ಮರದ ಕೆಳಗೆ ನಿಲ್ಲಿಸಿದ ಮೇಲೆ ದೊಡ್ಡಪ್ಪ ಕೆಳಗೆ ಇಳಿಯಲು ಒಪ್ಪಿಕೊಂಡ. ಕೂಡ್ಲಿಗಿ ಆಗ್ನಿಶಾಮಕ ದಳದ ಸಿಬ್ಬಂದಿ ಆತನನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ.

ಸಂಸಾರದಲ್ಲಿ ಸಮಸ್ಯೆ
ದೊಡ್ಡಪ್ಪನ ಮೊದಲ ವಿವಾಹ ಆತನ ಸೋದರ ಸೊಸೆಯೊಂದಿಗೆ 20 ವರ್ಷಗಳ ಹಿಂದೆ ಆಗಿತ್ತು. ಮಕ್ಕಳಾಗದ ಕಾರಣ ಆಕೆ ತವರು ಮನೆ ಸೇರಿದ್ದಳು. ನಂತರ ಕೂಡ್ಲಿಗಿ ಸಮೀಪದ ಶಿವಪುರ ಗೊಲ್ಲರಹಟ್ಟಿಯ ಮಹಿಳೆಯೊಂದಿಗೆ 2ನೇ ಮದುವೆಯಾಗಿತ್ತು. ಈಕೆಗೆ ಮೂವರು ಗಂಡು ಮಕ್ಕಳು ಜನಿಸಿದರು. ಆದರೆ, ಗಂಡ-ಹೆಂಡತಿ ನಡುವೆ ಮನಸ್ತಾಪವಾಗುತ್ತಿತ್ತು. ಇದರಿಂದಾಗಿ 5 ವರ್ಷಗಳ ಹಿಂದೆಯೇ ಆಕೆ ಗಂಡ, ಮನೆ, ಮಕ್ಕಳನ್ನು ಬಿಟ್ಟು ತವರು ಸೇರಿದ್ದಳು. ಒಂದು ಕಡೆ ಇಬ್ಬರು ಹೆಂಡಿರು ದೂರ ಇರುವುದು, ಇನ್ನೊಂದು ಕಡೆ ಮೂವರು ಮಕ್ಕಳನ್ನು ಪೋಷಿಸುವುದು ದೊಡ್ಡಪ್ಪನಿಗೆ ತಲೆನೋವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net